

ಹೈದರಾಬಾದ್: ಕಲ್ಲಂಗಡಿ ಹಣ್ಣು ತಿಂದ ಬಾಲಕರಿಬ್ಬರು ಸಾವಿಗೀಡಾಗಿರುವ ಘಟನೆ ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯಲ್ಲಿ ನಡೆದಿದ್ದು, ಮೂವರು ಸಾವು-ಬದಕಿನ ನಡುವೆ ಹೋರಾಡುತ್ತಿದ್ದಾರೆ.
ಕಲ್ಲಂಗಡಿ ಹಣ್ಣು ತಿಂದರೆ ಸಾಯ್ತಾರಾ? ಕಲ್ಲಂಗಡಿ ಆರೋಗ್ಯಕ್ಕೆ ಒಳ್ಳಯದು ಎಂದು ವೈದ್ಯರೇ ಹೇಳ್ತರಲ್ಲ ಎಂಬ ಪ್ರಶ್ನೆ ಎಲ್ಲರಲ್ಲು ಮೂಡುವುದು ಸಹಜ. ಆದರೆ, ಕಲ್ಲಂಗಡಿ ತಿಂದ ಮಕ್ಕಳು ಮೃತಪಟ್ಟಿದ್ದು ಹೇಗೆ ಎಂದು ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ!
ಅಸಲಿಗೆ ಏನು ನಡೆಯಿತು ಅಂದರೆ, ಮಾರ್ಚ್ 29ರ ಸೋಮವಾರ ಪೆದ್ದಪಲ್ಲಿಯ ಇಸ್ಸಾಂಪೇಟಾ ಗ್ರಾಮದ ಕುಟುಂಬ ಮನೆಗೆ ಕಲ್ಲಂಗಡಿ ಹಣ್ಣನ್ನು ಕೊಂಡು ತಂದಿದ್ದಾರೆ. ಮೊದಲು ಅರ್ಧವನ್ನು ತಿಂದು, ಉಳಿದ ಅರ್ಧವನ್ನು ಕಪ್ಬೋರ್ಡ್ನಲ್ಲಿ ಇಟ್ಟಿದ್ದರು. ಮತ್ತೆ ರಾತ್ರಿ ಉಳಿದ ಹಣ್ಣನ್ನು ತಿಂದಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ನಡು ರಾತ್ರಿಯಲ್ಲಿ ಇಡೀ ಕುಟುಂಬ ನೋವಿನಿಂದ ನರಳಾಡಿದೆ.
ತಕ್ಷಣ ಅವರನ್ನು ಕರೀಮ್ನಗರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಚಿಕಿತ್ಸೆ ನಡುವೆಯೇ ಫಲಕಾರಿಯಾಗದೇ ಬಾಲಕರಾದ ದರವೇಣಿ ಸಿವಾನಂದು (12) ಮತ್ತು ಚರಣ್ (10) ಏಪ್ರಿಲ್ 2ರಂದು ಮೃತಪಟ್ಟಿದ್ದಾರೆ. ಕುಟುಂಬ ಉಳಿದ ಸದಸ್ಯರಾದ ಶ್ರೀಶೈಲಂ, ಗುಣವತಿ ಮತ್ತು ಅಜ್ಜಿ ಸರಮ್ಮಲ್ ಅವರಿಗೆ ಚಿಕಿತ್ಸೆ ಮುಂದುವರಿಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ನಿಗೂಢ ಸಾವಿನ ಪ್ರಕರಣದ ತನಿಖೆ ಬೆನ್ನತ್ತಿದ ಪೊಲೀಸರಿಗೆ ಸತ್ಯಾಂಶ ತಿಳಿದು ಶಾಕ್ ಆಗಿದೆ. ಏಕೆಂದರೆ, ಮಕ್ಕಳು ಸಾವು ಮತ್ತು ಕುಟುಂಬದ ನೋವಿಗೆ ಮೂಲ ಕಾರಣವೇ ಇಲಿ ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಅಷ್ಟಕ್ಕೂ ನಡೆದಿದ್ದೇನೆಂದರೆ, ಮನೆಯಲ್ಲಿ ಇಲಿ ಕಾಟ ಹೆಚ್ಚಾಗಿದ್ದರಿಂದ ಅವುಗಳನ್ನು ಕೊಲ್ಲಲು ಇಲಿ ಪಾಶಾಣವನ್ನು ಮನೆಗೆ ತಂದಿದ್ದರು. ಇಲಿ ಪಾಶಾಣವನ್ನು ಸಿಂಪಡಿಸಿ ಉಳಿದದ್ದನ್ನು ಒಂದು ಕಪ್ಬೋರ್ಡ್ನಲ್ಲಿ ಇಟ್ಟಿದ್ದರು. ಇಲಿ ಮನೆಯಲ್ಲೆ ಓಡಾಗಿ ಪಾಶಾಣ ಸೇವಿಸಿ, ಅದೇ ಬಾಯಿಯಲ್ಲಿ ಮನೆಯಲ್ಲಿದ್ದ ಕಲ್ಲಂಗಡಿ ಹಣ್ಣನ್ನು ಸಹ ತಿಂದಿದೆ. ಇದು ತಿಳಿಯದೇ ಹಣ್ಣನ್ನು ತಿಂದು ಇಡೀ ಕುಟುಂಬ ಅನಾರೋಗ್ಯಕ್ಕೀಡಾಯಿತು ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಜಿರಳೆ, ಹಲ್ಲಿ ಮತ್ತು ಇಲಿ ಸೇರಿದಂತೆ ಯಾವುದೇ ಜೀವಿಗಳನ್ನು ಸಾಯಿಸಲು ಅಥವಾ ಅವುಗಳನ್ನು ಓಡಿಸಲು ಮನೆಗೆ ತರುವ ಔಷಧಿಗಳ ಬಗ್ಗೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು. ಸ್ವಲ್ಪ ಮೈಮರೆತರು ಮುಂದೇನಾಗಬಹುದು ಎಂಬುದಕ್ಕೆ ಪೆದ್ದಪಲ್ಲಿಯಲ್ಲಿ ನಡೆದ ಈ ಘಟನೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. (ಏಜೆನ್ಸೀಸ್)