ತೆಲಂಗಾಣ ರಾಜ್ಯದಲ್ಲಿ ಮೊದಲಿಗೆ ಮಾನವರ ಮೇಲೆ ಕೊವ್ಯಾಕ್ಸಿನ್​ ಪ್ರಯೋಗ

covaxin
Published on

ಹೈದರಾಬಾದ್​: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್​ ವೈರಾಲಜಿ ಸಹಯೋಗದಲ್ಲಿ ಹೈದರಾಬಾದ್​ ಮೂಲದ ಭಾರತ್​ ಬಯೋಟೆಕ್​ ಇಂಟರ್​ನ್ಯಾಷನಲ್​ ಲಿಮಿಟೆಡ್​ ಕಂಪನಿ ಅಭಿವೃದ್ಧಿಪಡಿಸಿರುವ ಕೋವಿಡ್​-19 ರೋಗನಿರೋಧಕ ಚುಚ್ಚುಮದ್ದು ಕೊವ್ಯಾಕ್ಸಿನ್​ ಅನ್ನು ಮಾನವರ ಮೇಲೆ ಪ್ರಯೋಗಿಸಲು ತೆಲಂಗಾಣ ಸಿದ್ಧವಾಗಿದೆ.

ನಿಜಾಂ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸಸ್​ನಲ್ಲಿ (ಎನ್​ಐಎಂಎಸ್​) ಮಾನವರ ಮೇಲೆ ಕೊವ್ಯಾಕ್ಸಿನ್​ ಪ್ರಯೋಗಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಎನ್​ಐಎಂಎಸ್​ ಅಲ್ಲದೆ, ಕೊವ್ಯಾಕ್ಸಿನ್​ ಪರೀಕ್ಷೆಗಾಗಿ ಐಸಿಎಂಆರ್​ ದೇಶದ ಇನ್ನೂ 12 ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಂಡಿದೆ.

ಆಗಸ್ಟ್​ 15ರಂದು ಕೊವ್ಯಾಕ್ಸಿನ್​ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಕೋವಿಡ್​ ಚಿಕಿತ್ಸಾ ಕೇಂದ್ರಗಳೆಲ್ಲವೂ ಕೊವ್ಯಾಕ್ಸಿನ್​ ಚುಚ್ಚುಮದ್ದನ್ನು ಮಾನವರ ಮೇಲೆ ಪ್ರಯೋಗಿಸಲು ಎಲ್ಲ ಆಸ್ಪತ್ರೆಗಳು ಎಲ್ಲ ರೀತಿಯ ಸಹಕಾರ ಕೊಡಬೇಕು ಎಂದು ಐಸಿಎಂಆರ್​ ಶುಕ್ರವಾರ ಪತ್ರ ಬರೆದಿತ್ತು.

ಆದರೆ, ಯಾವುದೇ ರೋಗನಿರೋಧಕ ಚುಚ್ಚುಮದ್ದನ್ನು ಎರಡು ಹಂತಗಳಲ್ಲಿ ಮಾನವರ ಮೇಲೆ ಪ್ರಯೋಗಿಸಬೇಕಾಗುತ್ತದೆ. ಇದಕ್ಕೆ ಕನಿಷ್ಠ ಎರಡು ವರ್ಷಗಳಾದರೂ ಬೇಕಾಗುತ್ತದೆ ಎಂದು ಹೇಳಿ ಕೆಲವರು ತರಾತುರಿಯಲ್ಲಿ ಕೊವ್ಯಾಕ್ಸಿನ್​ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಐಸಿಎಂಆರ್​ ನಿರ್ಧಾರವನ್ನು ಖಂಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net