ರಾಹುಲ್ ಗಾಂಧಿ ಮೌನ, ನಾನೇ ಮೈತ್ರಿಕೂಟದ ಸಿಎಂ ಆಭ್ಯರ್ಥಿ ಎಂದ ತೇಜಸ್ವಿ ಯಾದವ್​| Tejashwi Yadav

Tejashwi Yadav 30
Published on

Tejashwi Yadav: ಮುಂಬರುವ ಬಿಹಾರ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಬಿಹಾರದ ಮಹಾ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಏಕಪಕ್ಷೀಯವಾಗಿ ಘೋಷಿಸಿಕೊಂಡಿದ್ದಾರೆ.

ಈ ರ್‍ಯಾಲಿಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಸಮ್ಮುಖದಲ್ಲಿ ಅರಾದಲ್ಲಿ ನಡೆದ ರ್‍ಯಾಲಿಯಲ್ಲಿ ಈ ಘೋಷಣೆ ಹೊರಬಿದ್ದಿದೆ. ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡದ ರಾಹುಲ್ ಮೌನವಾಗಿದ್ದಾರೆ.

ನಿತೀಶ್ ಕುಮಾರ್ ಮೇಲೆ ಯಾದವ್​ ವಾಗ್ದಾಳಿ

ಯಾವುದೇ ಸ್ವಂತಿಕೆಯಿಲ್ಲದೆ ನೀತಿಗಳನ್ನು ತರುತ್ತಿರುವ ಸಿಎಂ ನಿತೀಶ್​​ರನ್ನು ನಕಲಿ ಮುಖ್ಯಮಂತ್ರಿ ಎಂದು ತೇಜಸ್ವಿ ಯಾದವ್​ ಕಿಡಿಕಾರಿದ್ದಾರೆ. ತೇಜಸ್ವಿ ಮುಂದೆ ಸಾಗುತ್ತಿದ್ದಾರೆ. ಸರ್ಕಾರ ಹಿಂದೆ ಹಿಂಬಾಲಿಸುತ್ತಿದೆ ಎಂದು ತೇಜಸ್ವಿ ಜನಸಮೂಹಕ್ಕೆ ತಿಳಿಸಿದರು. ನಿತೀಶ್ ಕುಮಾರ್ ಕೇವಲ ತಮ್ಮ ನೀತಿಗಳು ಮತ್ತು ಘೋಷಣೆಗಳನ್ನು ನಕಲಿಯಾಗಿ ಮಾಡುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಮುಂದುವರೆದು ಮಾತನಾಡಿದ ಯಾದವ್​, ಮೂಲ ಮುಖ್ಯಮಂತ್ರಿ ಬೇಕೇ ಅಥವಾ ನಕಲಿ ಮುಖ್ಯಮಂತ್ರಿ ಬೇಕೇ ಎಂದು ಜನರನ್ನು ಕೇಳುತ್ತಾ, ಬಿಹಾರದ ಉನ್ನತ ಹುದ್ದೆಗೆ ತಮ್ಮನ್ನು ಮೂಲ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿದ್ದಾರೆ.

ಚುನಾವಣಾ ಆಯೋಗದ ವಿರುದ್ಧ ಗುಡುಗಿದ ಯಾದವ್​

ಚುನಾವಣಾ ಆಯೋಗದ ಮತಕಳ್ಳತನದ ಬಗ್ಗೆ ಮಾತನಾಡಿರುವ ಯಾದವ್, ಚುನಾವಣಾ ಆಯೋಗವು ಇನ್ನು ಮುಂದೆ ಚುನಾವಣಾ ಆಯೋಗವಲ್ಲ. ಅದು ಗೋದಿ ಆಯೋಗ್ ಆಗಿ ಮಾರ್ಪಟ್ಟಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಈಗ ಚುನಾವಣಾ ಆಯೋಗವು ಬಿಜೆಪಿ ಪಕ್ಷದ ಒಂದು ಘಟಕದಂತೆ, ಬಿಜೆಪಿಯ ಕಾರ್ಯಕರ್ತನಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.

ಭಾರತದ ಪ್ರಜಾಪ್ರಭುತ್ವವನ್ನು ಉಳಿಸಲು, ಸಂವಿಧಾನವನ್ನು ಉಳಿಸಲು, ಮತದಾನದ ಹಕ್ಕನ್ನು ರಕ್ಷಿಸಲು ಮತ್ತು ಜನರ ಅಸ್ತಿತ್ವವನ್ನು ಉಳಿಸಲು, ರಾಹುಲ್ ಗಾಂಧಿ ಮತ್ತು ನಾವೆಲ್ಲರೂ ಈ ಯಾತ್ರೆಗೆ ಹೊರಟಿದ್ದೇವೆ. ಈ ಯಾತ್ರೆಯಲ್ಲಿ ಒಂದು ವಿಷಯ ಸ್ಪಷ್ಟವಾಗಿದೆ, ನಾವು ಗ್ರಾಮೀಣ ಪ್ರದೇಶಗಳಿಗೆ ತಳಮಟ್ಟದಲ್ಲಿಯೂ ಭೇಟಿ ನೀಡಿದ್ದೇವೆ. ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಕೊನೆಗೊಂಡಿದೆ ಎಂದು ಯಾದವ್​ ಗುಡುಗಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net