ಬಿಹಾರ ಡಿಸಿಎಂ ವಿಜಯ್ ಕುಮಾರ್ ಸಿನ್ಹಾ ರಾಜೀನಾಮೆಗೆ ತೇಜಸ್ವಿ ಯಾದವ್​ ಆಗ್ರಹ; ಕಾರಣವೇನು? | Tejashwi Yadav

Tejashwi yadav
Published on

Tejashwi Yadav: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತ ವಿವಾದದ ನಡುವೆಯೇ, ಆರ್​​ಜೆಡಿ ನಾಯಕ ತೇಜಸ್ವಿ ಯಾದವ್ ಭಾನುವಾರ(ಆಗಸ್ಟ್​​ 10) ಬಿಹಾರ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಎರಡು ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಯಾದವ್, ವಿಜಯ್ ಕುಮಾರ್ ಸಿನ್ಹಾ, ಎರಡು ವಿಧಾನಸಭಾ ಕ್ಷೇತ್ರಗಳ ಮತದಾರರಾಗಿದ್ದಾರೆ. ಅವರ ಹೆಸರು ಲಖಿಸರಾಯ್ ವಿಧಾನಸಭಾ ಕ್ಷೇತ್ರ ಮತ್ತು ಬಂಕಿಪುರ ವಿಧಾನಸಭಾ ಕ್ಷೇತ್ರದಲ್ಲಿಯೂ ಇದೆ ಎಂದು ಹೇಳಿದರು.

ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆಯ (SIR) ನಂತರ ಇದು ಸಂಭವಿಸಿರುವುದು ಅಚ್ಚರಿಯ ಸಂಗತಿಯಾಗಿದ್ದು, ಇದರ ಹೊಣೆಯನ್ನು ಸಿನ್ಹಾ ಹೊರುತ್ತಾರೋ ಅಥವಾ ಚುನಾವಣಾ ಆಯೋಗ? ಹೊರುತ್ತದೆಯೋ ಎಂದು ಪ್ರಶ್ನಿಸಿದರು.

ಡಿಸಿಎಂ ಸಿನ್ಹಾ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ವಿಜಯ್ ಕುಮಾರ್ ಸಿನ್ಹಾ ತೀರುಗೇಟು

ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ, ಆರ್‌ಜೆಡಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಂಕಿಪುರದಿಂದ ತಮ್ಮ ಹೆಸರನ್ನು ತೆಗೆದುಹಾಕಲು ಬೂತ್ ಮಟ್ಟದ ಅಧಿಕಾರಿಗೆ ಅರ್ಜಿ ಸಲ್ಲಿಸಿರುವ ಅಧಿಕೃತ ರಶೀದಿಗಳು ಇರುವುದಾಗಿ ತಿರುಗೇಟು ನೀಡಿದ್ದಾರೆ.

ನಾನು ಒಂದೇ ಸ್ಥಳದಿಂದ ಮತ ಚಲಾಯಿಸಿದ್ದೇನೆ. ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವ ತೇಜಸ್ವಿ ಯಾದವ್​, ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತಿದ್ದಾರೆ ಎಂದರು. ಇತರರ ಮಾನ ಹಾಳು ಮಾಡುವುದನ್ನು ರೂಡಿ ಮಾಡಿಕೊಂಡಿರುವ ತೇಜಸ್ವಿ ಆಟಗಳು ಇಡೀ ಬಿಹಾರಕ್ಕೆ ತಿಳಿದಿದ್ದು, ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಕ್ಕಾಗಿ ಕ್ಷಮೆಯಾಚಿಸುವಂತೆ ಆಗ್ರಹಿಸಿದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net