Bihar Election | ಈ ಕೆಲಸ ಮಾಡುವವರಿಗೆ ನನ್ನ ಬೆಂಬಲ; ಚುನಾವಣೋತ್ತರ ಮೈತ್ರಿಯ ಸುಳಿವು ಕೊಟ್ಟ ತೇಜ್​ ಪ್ರತಾಪ್​ ಯಾದವ್​

Tej pratap Yadav
Published on

Bihar Election: ಆರ್‌ಜೆಡಿ ಪಕ್ಷದಿಂದ ಉಚ್ಛಾಟಿತರಾಗಿರುವ ತೇಜ್ ಪ್ರತಾಪ್ ಯಾದವ್, ಚುನಾವಣೋತ್ತರ ಮೈತ್ರಿ ಬಗ್ಗೆ ಮಾತನಾಡಿದ್ದು, ರಾಜ್ಯದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿ, ಯುವಕರಿಗೆ ನೆರವಾಗುವವರಿಗೆ ತಮ್ಮ ಪಕ್ಷ ಬೆಂಬಲ ನೀಡುತ್ತದೆ ಎಂದಿದ್ದಾರೆ.

ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ತಲೆದೂರಿದೆ, ಯುವಕರು ಉದ್ಯೋಗ ಇಲ್ಲದೇ ಕಷ್ಟ ಪಡುತ್ತಿದ್ದು, ಅವರ ನೋವಿಗೆ ಸ್ಪಂದಿಸುವ ಪಕ್ಷಕ್ಕೆ ನಾನು ಬೆಂಬಲ ನೀಡುತ್ತೇನೆ ಎಂದು ತೇಜ್​ ಪ್ರತಾಪ್​ ತಿಳಿಸಿದ್ದಾರೆ ಎಂದು ವರದಿಯಾಗಿದೆ. ತೇಜ್​​ ಈ ಹೇಳಿಕೆ ನೀಡುವಾಗ ಬಿಜೆಪಿ ಸಂಸದ ರವಿ ಕಿಶನ್ ಅವರೊಂದಿಗೆ ಇದ್ದರು ಎನ್ನಲಾಗಿದೆ.

ಇದೇ ವೇಳೆ ಸಂಸದ ರವಿ ಕಿಶನ್​ ಕೂಡ ಮಾತನಾಡಿದ್ದು, ತೇಜ್ ಪ್ರತಾಪ್ ಕರುಣೆ ಇರುವ ವ್ಯಕ್ತಿ, ಯಾವುದೇ ವೈಯಕ್ತಿಕ ಆಕಾಂಕ್ಷೆಗಳಿಲ್ಲದೆ ಜನರ ಸೇವೆ ಮಾಡುವ ಇಚ್ಛೆ ಹೊಂದಿರುವವರಿಗೆ ಬಿಜೆಪಿ ಯಾವಾಗಲೂ ತನ್ನ ಹೃದಯವನ್ನು ತೆರೆದಿಟ್ಟಿರುತ್ತದೆ ಎಂದು ಹೇಳಿದರು.

ಆರ್‌ಜೆಡಿಯಿಂದ ತೇಜ್ ಪ್ರತಾಪ್ ಉಚ್ಚಾಟನೆ

ವರ್ಷಾರಂಭದಲ್ಲಿ ತೇಜ್ ಪ್ರತಾಪ್​ರನ್ನು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ದಿಂದ ಹೊರಹಾಕಲಾಯಿತು. ಸಧ್ಯ ಮಹುವಾ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ತಮ್ಮ ಹೊಸ ಪಕ್ಷದಿಂದ ಸ್ಪರ್ಧಿಸುತ್ತಿರುವ ಲಾಲು ಹಿರಿಯ ಪುತ್ರ, ತಾವು ಆರ್‌ಜೆಡಿಗೆ ಹಿಂತಿರುಗುವುದಿಲ್ಲ ಮತ್ತು ಬೇಕಿದ್ದರೆ ಸಾವನ್ನೇ ಆರಿಸಿಕೊಳ್ಳುತ್ತೇನೆ ಎಂದು ಈ ಹಿಂದೆ ಹೇಳಿದ್ದರು. ಆರ್​​ಜೆಡಿಗೆ ಮರಳುವ ಬದಲು ನಾನು ಸಾವನ್ನು ಆರಿಸಿಕೊಳ್ಳುತ್ತೇನೆ. ನನಗೆ ಅಧಿಕಾರದ ಕುರಿತಾಗಿ ಯಾವುದೇ ರೀತಿಯಲ್ಲೂ ಹಸಿವಿಲ್ಲ. ತತ್ವಗಳು ಮತ್ತು ಸ್ವಾಭಿಮಾನ ನನಗೆ ಹೆಚ್ಚು, ಜನರಿಗಾಗಿ ಕೆಲಸ ಮಾಡುವುದೇ ನನಗೆ ಎಲ್ಲಕ್ಕಿಂತ ದೊಡ್ಡ ವಿಷಯ. ನಾನು ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಪಿಟಿಐ ಜೊತೆ ಮಾತನಾಡುತ್ತಾ ಹೇಳಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net