

ಹಾಸನ: ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಮಾಡಿ ಹೆಚ್ಚಿನ ಫಾಲೋವರ್ಸ್ಗಳನ್ನು ಸೆಳೆಯಬೇಕು ಎಂಬ ನಿಟ್ಟಿನಲ್ಲಿ ಹಲವಾರು ಯುವಕರು ಈ ಒಂದು ಹುಚ್ಚು ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ. ಸದ್ಯ ಅದೇ ರೀತಿ ಹಾಸನದ ಇಬ್ಬರು ಯುವಕರು ನಕಲಿ ಗನ್ ಬಳಸಿಕೊಂಡು ಮಾಡಿದ ರೀಲ್ಸ್ಗಾಗಿ ಇಂದು ಪೊಲೀಸರ ಅತಿಥಿಯಾಗಿದ್ದಾರೆ.
ಘಟನೆಯ ವಿವರ: ಹಾಸನದ ಇಬ್ಬರು ಯುವಕರು ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡಬೇಕು ಎಂದು ನಗರದ ರಿಂಗ್ ರಸ್ತೆಯಲ್ಲಿ ತಮ್ಮ ಬುಲೆಟ್ ಬೈಕ್ನಲ್ಲಿ ನಕಲಿ ಗನ್ ಹಿಡಿದು ವೀಡಿಯೋ ಮಾಡಿದ್ದಾರೆ. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್ ಮಾಡಿದ್ದಾರೆ. ದೃಶ್ಯಾವಳಿ ವ್ಯಾಪಕವಾಗಿ ವೈರಲ್ ಆದ ಬೆನ್ನಲ್ಲೇ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಇಬ್ಬರು ಯುವಕರು ನಕಲಿ ಗನ್ ಹಿಡಿದು ಮಾಡಿದ ರೀಲ್ಸ್ ಅನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು. ವೀಡಿಯೋ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ ಪೊಲೀಸರು ದೃಶ್ಯವನ್ನು ಸೂಕ್ಷ್ಮವಾಗಿ ಗಮನಿಸಿ, ಗನ್ ಅಸಲಿಯೋ? ನಕಲಿಯೋ? ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಹುಡುಗರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತ ವರ್ತನೆ ತೋರಿದ ಇಬ್ಬರು ಯುವಕರ ವಿರುದ್ಧ ಹಾಸನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ,(ಏಜೆನ್ಸೀಸ್).