ಪ್ರೀತಿಯಲ್ಲಿ ಬಿದ್ದ ಹದಿಹರೆಯದ ಹುಡುಗಿ, ವಿವಾಹಿತ ವ್ಯಕ್ತಿ ಹೇಳಿದರು ಜೀವನಕ್ಕೆ ಗುಡ್​ಬೈ

suside
Published on

ಹೈದರಾಬಾದ್​: ಹದಿಹರೆಯದ ಪ್ರೀತಿಯೇ ಹಾಗೆ...ಪ್ರೀತಿ ಕುರುಡು...ಇಂತಹ ಮಾತುಗಳು ಯಾವಾಗಲೂ ಕೇಳಿಬರುತ್ತಿರುತ್ತವೆ. ಇದಕ್ಕೆ ನಿದರ್ಶನ ಇಲ್ಲಿದೆ.

ಹದಿಹರೆಯದ ಯುವತಿಯೊಬ್ಬಳು ಹಿಂದೆ ಮುಂದೆ ನೋಡದೆ ವಿವಾಹಿತ ವ್ಯಕ್ತಿಯನ್ನು ಪ್ರೀತಿಸಿದ್ದು, ಮದುವೆಯಾಗಲು ಹಿರಿಯರು ಒಪ್ಪದ ಹಿನ್ನೆಲೆಯಲ್ಲಿ ಇಬ್ಬರೂ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ತೆಲಂಗಾಣದ ಮಂಚೇರಿಯಲ್‌ ಜಿಲ್ಲೆಯ ಜೈಪುರ ಮಂಡಲದ ರಸೂಲಪಲ್ಲಿ ನಡೆದಿದೆ. ಕುರುಡು ಪ್ರೀತಿ ಕಾರಣಕ್ಕೆ ಕುಟುಂಬವೊಂದು ಬೀದಿಗೆ ಬಿದ್ದಿದೆ.

ದ್ವಿತೀಯ ಪಿಯುಸಿ ಓದುತ್ತಿದ್ದ ಮಂದಮರಿ ಪಟ್ಟಣದ ಖಾಸಗಿ ಶಿಕ್ಷಕ ರಾಜಯ್ಯ ಅವರ ಪುತ್ರಿ ಶ್ರೀವಿದ್ಯಾ (18) ವಿವಾಹಿತ ವ್ಯಕ್ತಿ ಹಾಗೂ ಕಾರು ಚಾಲಕ ಗೋದಾವರಿಖನಿ ಪಟ್ಟಣದ ತಿಲಕನಗರದ ವೆಂಕಟೇಶ್ (30) ಅವರನ್ನು ಪ್ರೀತಿಸುತ್ತಿದ್ದಳು. ವೆಂಕಟೇಶ್ ಗೆ ಈಗಾಗಲೇ ವಿವಾಹವಾಗಿದ್ದು, ಎಂಟು ವರ್ಷದೊಳಗಿನ ಇಬ್ಬರು ಗಂಡು ಮಕ್ಕಳಿದ್ದರು.

ಬೆಳಗ್ಗೆ 6 ಗಂಟೆ ಸುಮಾರಿಗೆ ಮಂಚೇರಿಯಾದ ಚೆನ್ನೂರು ರಸ್ತೆಯ ಏಕಾಂತ ಸ್ಥಳದಲ್ಲಿ ಕ್ರಿಮಿನಾಶಕ ಸೇವಿಸಿ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದು, ಶ್ರೀವಿದ್ಯಾ ಮಂಚೇರಿಯಾ ಜಿಲ್ಲಾಸ್ಪತ್ರೆಗೆ ಸಾಗಿಸುವ ವೇಳೆ ಕೊನೆಯುಸಿರೆಳೆದಿದ್ದಾಳೆ. ದಾರಿಹೋಕರು ಇಬ್ಬರನ್ನು ಗಮನಿಸಿ ಪೊಲೀಸರ ಗಮನಕ್ಕೆ ತಂದಿದ್ದು. ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಲಕಿಯನ್ನು ರಕ್ಷಿಸಲು ಪ್ರಯತ್ನಿಸಿದರು, ಆದರೆ ವ್ಯರ್ಥವಾಯಿತು.

ಮೂಲಗಳ ಪ್ರಕಾರ ವೆಂಕಟೇಶ್ ಮತ್ತು ಶ್ರೀವಿದ್ಯಾ ಗೋದಾವರಿಖಾನಿಯಲ್ಲಿರುವ ತನ್ನ ತಾಯಿಯ ಚಿಕ್ಕಪ್ಪನ ಮನೆಗೆ ಭೇಟಿ ನೀಡಿದಾಗ ಪರಿಚಯವಾಗಿ ಇಬ್ಬರು ಫೋನ್ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡಿದ್ದು, ಬಳಿಕ ಆಕೆಯೊಂದಿಗೆ ನಿರಂತರವಾಗಿ ಮಾತನಾಡುವ ಅಥವಾ ಸಂದೇಶ ಕಳುಹಿಸುವ ಮೂಲಕ ಆಕೆಯನ್ನು ಬಲೆಗೆ ಬೀಳಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net