ಸ್ಥಳೀಯ ಸವಾಲುಗಳಿಗೆ ತಾಂತ್ರಿಕತೆ ಪರಿಹಾರ ನೀಡಿ: ಎಸ್.ಎನ್.ನಾಗರಾಜ

jnnce programme
ಶಿವಮೊಗ್ಗ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ನೂತನ ರಿಸರ್ಚ್ ಪ್ರಮೋಷನ್ ಪಾಲಿಸಿಯನ್ನು ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಬಿಡುಗಡೆಗೊಳಿಸಿದರು. ಡಾ. ಪಿ.ನಾರಾಯಣ್, ಡಾ. ಎಸ್.ವಿ.ಸತ್ಯನಾರಾಯಣ, ಡಾ. ವೈ.ವಿಜಯಕುಮಾರ್, ಡಾ. ಪಿ.ಮಂಜುನಾಥ ಇದ್ದರು.
Published on

ಶಿವಮೊಗ್ಗ: ನಮ್ಮ ನಡುವೆ ಇರುವ ಅನೇಕ ಸ್ಥಳೀಯ ಸವಾಲುಗಳಿಗೆ ತಾಂತ್ರಿಕ ಪರಿಹಾರ ನೀಡುವತ್ತ ಇಂಜಿನಿಯರಿಂಗ್ ಸಂಶೋಧನಾರ್ಥಿಗಳು ಚಿತ್ತ ಹರಿಸಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಹೇಳಿದರು.

ನಗರದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನೂತನ ರಿಸರ್ಚ್ ಪ್ರಮೋಷನ್ ಪಾಲಿಸಿ (ಜೆಎನ್‌ಎನ್‌ಸಿಇ ಸಂಶೋಧನಾ ಬೆಂಬಲ ನೀತಿ) ಬಿಡುಗಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಇಂಜಿನಿಯರಿಂಗ್ ವಲಯದಲ್ಲಿರುವ ಭೋದಕರು ಶೈಕ್ಷಣಿಕ ಚಟುವಟಿಕೆಗಳಿಗೆ ಸೀಮಿತರಾಗಬಾರದು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಭಾಗವಹಿಸುವ ತಾಂತ್ರಿಕ ವಿಚಾರ ಸಂಕಿರಣಗಳಿಂದ ಪಡೆಯುವ ಜ್ಞಾನವನ್ನು ಆವಿಷ್ಕಾರ ಯೋಜನೆಗಳನ್ನು ರೂಪಿಸಲು ಸದ್ಬಳಕೆ ಮಾಡಿಕೊಳ್ಳಬೇಕು. ನಮ್ಮ ಸುತ್ತಲಿರುವ ಮೂಲ ಅಗತ್ಯ ಹಾಗೂ ನಿರ್ವಹಣೆಯಲ್ಲಿನ ಸವಾಲುಗಳಿಗೆ ತಾಂತ್ರಿಕ ಪರಿಹಾರ ನೀಡಲು ಕಾಲೇಜು ರೂಪಿಸಿರುವ ಇಂತಹ ಸಂಶೋಧನಾ ನೀತಿಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎನ್‌ಇಎಸ್ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್ ಮಾತನಾಡಿ, ಇಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಕ್ಕೆ ಕಾಲೇಜು ಅನೇಕ ಕೊಡುಗೆಗಳನ್ನು ನೀಡುವ ಮಹತ್ವಾಕಾಂಕ್ಷೆಗೆ ಸಂಶೋಧನಾ ಬೆಂಬಲ ನೀತಿ ಮತ್ತಷ್ಟು ಬಲ ನೀಡಿದೆ. ಪ್ರತಿಯೊಬ್ಬ ಇಂಜಿನಿಯರಿಂಗ್ ಉಪನ್ಯಾಸಕರಲ್ಲಿ ಸಂಶೋಧನಾ ಸಾಮರ್ಥ್ಯವಿದೆ. ಅಂತಹ ಕೌಶಲವನ್ನು ಬಳಸಿ ತಾಂತ್ರಿಕ ಸ್ಪರ್ಶದ ಮೂಲಕ ಸಾಮಾಜಿಕ ಕಳಕಳಿ ಮೆರೆಯಬೇಕು ಎಂದು ತಿಳಿಸಿದರು. ಪ್ರಾಚಾರ್ಯ ಡಾ.ವೈ.ವಿಜಯಕುಮಾರ್, ಶೈಕ್ಷಣಿಕ ಡೀನ್ ಡಾ. ಪಿ.ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.

ಸಂಶೋಧನೆಗೆ ಪ್ರೇರಣೆ
ಸಂಶೋಧನಾ ಚಟುವಟಿಕೆಗಳಿಗೆ ಪ್ರೇರಣೆ ನೀಡುವುದು ನೂತನ ರಿಸರ್ಚ್ ಪ್ರಮೋಷನ್ ಪಾಲಿಸಿ ಪ್ರಾಥಮಿಕ ಉದ್ದೇಶ. ವಿದ್ಯಾಸಂಸ್ಥೆ ಮತ್ತು ಕೈಗಾರಿಕೆಗಳ ನಡುವಿನ ಕೊಂಡಿಯಾಗಲಿದೆ ಎಂದು ಕಾಲೇಜಿನ ಸಂಶೋಧನಾ ಡೀನ್ ಡಾ. ಎಸ್.ವಿ.ಸತ್ಯನಾರಾಯಣ ಹೇಳಿದರು. ಕಂಪನಿಗಳೊಂದಿಗೆ ಒಡಂಬಡಿಕೆ, ಯೋಚನೆಗಳನ್ನು ಉತ್ಪನ್ನ ಯೋಜನೆಗಳಾಗಿ ನಿರ್ಮಾಣ, ಪ್ರತಿ ತಾಂತ್ರಿಕ ವಿಷಯಗಳಿಗೆ ಸೆಂಟರ್ ಫಾರ್ ಎಕ್ಸಲೆನ್ಸ್ ನಿರ್ಮಾಣ, ಪೇಟೆಂಟ್ ಫೈಲಿಂಗ್, ಕಾಪಿ ರೈಟ್ಸ್ ಪ್ರಕ್ರಿಯೆ ಒಳಗೊಂಡಿದೆ. ಇದರೊಂದಿಗೆ ಸಂಶೋಧನಾ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮತ್ತು ಸಂಶೋಧನೆ ನಡೆಸಲು ಸರ್ಕಾರಿ ಖಾಸಗಿ ಸಂಸ್ಥೆಗಳಿಂದ ಆರ್ಥಿಕ ಬೆಂಬಲ ಪಡೆಯುವ ಪ್ರಯತ್ನಗಳು, ಪ್ರತಿಷ್ಠಿತ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಬಂಧಗಳ ಪ್ರಕಟಣೆಯಂತಹ ಕಾರ್ಯಚಟುವಟಿಕೆಗಳು ನೀತಿಯ ಮೂಲಕ ನಡೆಯಲಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net