

ಶಿವಮೊಗ್ಗ: ಮೊಬೈಲ್ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಇಂದು ಪ್ರತಿಯೊಬ್ಬರೂ ಛಾಯಾಗ್ರಾಹಕರಾಗುತ್ತಿದ್ದಾರೆ. ಹೀಗಾಗಿ ಚಲನಚಿತ್ರ ಛಾಯಾಗ್ರಾಹಕರಿಗೆ ಅನೇಕ ಸವಾಲುಗಳಿವೆ. ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ವೃತ್ತಿ ಕೌಶಲ ರೂಢಿಸಿಕೊಂಡು ಭಿನ್ನವಾಗಿ ಕೆಲಸ ಮಾಡಿದರೆ ಮಾತ್ರ ಸವಾಲುಗಳನ್ನು ಎದುರಿಸಬಹುದು ಎಂದು ಚಲನಚಿತ್ರ ಛಾಯಾಗ್ರಾಹಕ, ನಿರ್ದೇಶಕ ಡಾ.ಅಶೋಕ್ ಕಶ್ಯಪ್ ಹೇಳಿದರು.
ಕುವೆಂಪು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಲನಚಿತ್ರ ಛಾಯಾಗ್ರಹಣದ ಇತ್ತೀಚಿನ ಪ್ರವೃತ್ತಿಗಳು ಎಂಬ ವಿಷಯ ಕುರಿತು ಮಾತನಾಡಿದ ಅವರು, ಎಲ್ಲ ಕ್ಷೇತ್ರಗಳಲ್ಲೂ ಡಿಜಿಟಲ್ ತಂತ್ರಜ್ಞಾನ ಪ್ರಭಾವ ಬೀರಿರುವಂತೆ ಚಲನಚಿತ್ರ ಕ್ಷೇತ್ರದ ಮೇಲೂ ಪ್ರಭಾವ ಉಂಟು ಮಾಡಿದೆ ಎಂದರು.
ನಮ್ಮ ದೇಶದ ಚಲನಚಿತ್ರ ಕ್ಷೇತ್ರದಲ್ಲಿ ಮುಂದುವರಿದ ದೇಶಗಳ ತಂತ್ರಜ್ಞಾನವನ್ನು ಅಳವಡಿಸಬೇಕಾದರೆ ಹತ್ತಿಪ್ಪತ್ತು ವರ್ಷಗಳು ಬೇಕಾಗುತ್ತಿತ್ತು. ಆದರೆ ಇವತ್ತು ಡಿಜಿಟಲ್ ಕ್ರಾಂತಿಯಿಂದಾಗಿ ಯಾವುದೇ ತಂತ್ರಜ್ಞಾನವನ್ನು ಕ್ಷಣ ಮಾತ್ರದಲ್ಲಿ ಅಳವಡಿಸಿಕೊಳ್ಳುವುದು ಸಾಧ್ಯವಾಗಿದೆ. ಕಡಿಮೆ ಅವಧಿ ಹಾಗೂ ಕಡಿಮೆ ಖರ್ಚಿನಲ್ಲಿ ಯಾವುದೇ ಲೊಕೇಶನ್‌ಗೆ ಹೋಗದೆ ಸ್ಟೂಡಿಯೋದಲ್ಲೇ ಕುಳಿತು ಅದ್ಭುತ ಚಿತ್ರಗಳನ್ನು ನಿರ್ಮಾಣ ಮಾಡಬಹುದು ಎಂದು ಹೇಳಿದರು.
ಡಿಜಿಟಲ್ ತಂತ್ರಜ್ಞಾನದಿಂದ ಚಲನಚಿತ್ರದ ಮಾರುಕಟ್ಟೆ ವಿಸ್ತಾರವಾಗಿದೆ. ಭಿನ್ನ ವೇದಿಕೆಗಳಲ್ಲಿ ಒಂದೇ ದಿನದ ಪ್ರದರ್ಶನದಲ್ಲಿ ಒಂದು ಚಲನಚಿತ್ರವು ತನ್ನ ಖರ್ಚನ್ನು ತುಂಬಿ ಲಾಭ ಗಳಿಸುವ ಮಟ್ಟಿಗೆ ಮಾರುಕಟ್ಟೆ ಬೆಳೆದಿದೆ. ಕೆಜಿಎಫ್, ಕಾಂತಾರದಂತಹ ಚಲನಚಿತ್ರಗಳು ಯಶಸ್ವಿಯಾಗಲು ಇದೇ ಕಾರಣ ಎಂದರು.
ಒಂದು ಚಲನಚಿತ್ರ ಯಶಸ್ವಿಯಾಗಲು ಉತ್ತಮ ಕಥೆ ಹಾಗೂ ಶೀರ್ಷಿಕೆ ಮುಖ್ಯವಾಗುತ್ತದೆ. ಕಥೆ ಗಟ್ಟಿಯಾಗಿದ್ದರೆ ಅಭಿನಯ, ನಿರ್ದೇಶನ, ಛಾಯಾಗ್ರಹಣ ಮುಂತಾದ ಅಂಶಗಳು ತನ್ನಿಂದ ತಾನೆ ಗಟ್ಟಿಯಾಗುತ್ತವೆ. ಆದ್ದರಿಂದ ಚಲನಚಿತ್ರ ನಿರ್ಮಾಪಕರು ಚಲನಚಿತ್ರದ ವಿವಿಧ ಶಾಖೆಗಳಿಗೆ ಹೊಂದುವ ಗಟ್ಟಿ ಕಥೆಗಳನ್ನು ಆಯ್ಕೆ ಮಾಡಬೇಕೆಂದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಕರಾದ ಡಾ.ಸತೀಶ್ ಕುಮಾರ್ ಅಂಡಿಂಜೆ, ಪ್ರೊ.ಪಿ.ಎ.ವರ್ಗೀಸ್ ಉಪಸ್ಥಿತರಿದ್ದರು.