

ಆಯನೂರು: ತಂತ್ರಜ್ಞಾನ ಎಂಬುದು ಎಲ್ಲ ಕ್ಷೇತ್ರಗಳಲ್ಲೂ ಹಾಸುಹೊಕ್ಕಾಗಿದೆ. ನಗರ, ಪಟ್ಟಣಗಳಿಗೆ ಸೀಮಿತವಾಗಿದ್ದ ತಂತ್ರಜ್ಞಾನ ಆಧಾರಿತ ಶಿಕ್ಷಣ ಗ್ರಾಮಾಂತರದ ವಿದ್ಯಾರ್ಥಿಗಳಿಗೂ ಸಿಗುವಂತಾಗಿರುವುದು ಸಂತೋಷದಾಯಕ ಎಂದು ಶಿವಮೊಗ್ಗ ಬಿಇಒ ನಾಗರಾಜ್ ಹೇಳಿದರು.
ಆಯನೂರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಗೆ ಎಸ್‌ಬಿಐ ಹಾಗೂ ಸಿಎಲ್ಟಿ ಸಂಸ್ಥೆಯಿಂದ ಸ್ಮಾರ್ಟ್ ಟಿವಿ ವಿತರಣೆ ಮತ್ತು ಇ-ಪಾಠಶಾಲಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಲಾಖೆಯಿಂದಲೂ ಸ್ಮಾರ್ಟ್ ಶಾಲೆಗಳನ್ನು ತೆರೆಯುತ್ತಿದ್ದೇವೆ. ಈವರೆಗೆ ಶೇ.75ರಷ್ಟು ಪ್ರಗತಿ ಸಾಧಿಸಿದ್ದೇವೆ. ಸ್ಮಾರ್ಟ್ ತರಗತಿಗಳಿಗೆ 2 ಲಕ್ಷ ರೂ.ವರೆಗೂ ಖರ್ಚಾಗಲಿದೆ. ಖಾಸಗಿ ಸಂಸ್ಥೆಗಳು ತೋರುವಂತಹ ಸಾಮಾಜಿಕ ಕಳಕಳಿ, ಸಹಕಾರದಿಂದ ಯಶಸ್ಸು ಸಾಧಿಸುವಂತಾಗಿದೆ. ಗ್ರಾಮೀಣ ಭಾಗದಲ್ಲಿ ಇಂಟರ್‌ನೆಟ್ ಸಮಸ್ಯೆ ಇದೆ. ಹೀಗಾಗಿ ಆಫ್‌ಲೈನ್ ಮತ್ತು ಆನ್‌ಲೈನ್ ಎರಡರಲ್ಲೂ ಶಿಕ್ಷಣ ದೊರೆಯುತ್ತಿರುವುದರಿಂದ ಎಲ್ಲ ಸಮಯದಲ್ಲೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿದೆ ಎಂದರು.
ಕಂಪ್ಯೂಟರ್ ಶಿಕ್ಷಣ ನೀಡಬೇಕಿರುವುದರಿಂದ ಶಿಕ್ಷಕರು ಅಪ್ಡೆಟ್ ಆಗಬೇಕು. ಮಕ್ಕಳಿಗೆ ಸತ್ವಯುತ ಶಿಕ್ಷಣದ ಅನಿವಾರ್ಯತೆ ಇದೆ. ನೀವು ಶಿಕ್ಷಿತರಾದರೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯ. ಇ-ಪಾಠಶಾಲಾ ಸೌಲಭ್ಯ ಗ್ರಾಮೀಣ ವಿದ್ಯಾರ್ಥಿಗಳು ಪಡೆದುಕೊಂಡು ಯಶಸ್ಸು ಸಾಧಿಸಲಿ ಎಂದರು.
ಗ್ರಾಮೀಣ ಭಾಗದಲ್ಲಿ ಇಂಟರ್‌ನೆಟ್ ಸಮಸ್ಯೆ ಹೆಚ್ಚಾಗಿದೆ. ಕೆಲವು ಶಾಲೆಗಳಲ್ಲಿ ಕೊಠಡಿ ಕೊರತೆ, ಲ್ಯಾಬ್ ಕೊರತೆ, ಉಪಕರಣಗಳ ಕೊರತೆ, ವಿದ್ಯುತ್ ಕೊರತೆ ಮತ್ತಿತರ ಸಮಸ್ಯೆಗಳಿವೆ. ಬೋರ್ಡ್ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸುವ ವಿದ್ಯಾರ್ಥಿಗಳು ಸಿಇಟಿ, ನೀಟ್, ಜೆಇಇ, ಐಎಎಸ್, ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿಫಲರಾಗುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ತೆಗೆದುಕೊಳ್ಳುವ ಶಿಕ್ಷಣ ನೀಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಲ್ಟಿ ಟ್ರಸ್ಟ್‌ನ ಸಿಇಒ ನಿಕ್ಸಾನ್ ಜೋಸೆಫ್ ಮಾತನಾಡಿ, ಸಂಸ್ಥೆಯಿಂದ 52 ಇಂಚಿನ 40 ಸ್ಮಾರ್ಟ್ ಟಿವಿಗಳನ್ನು ವಿತರಿಸುತ್ತಿದ್ದು, ಇದರಲ್ಲಿ 38 ಟಿವಿಗಳನ್ನು ಶಿವಮೊಗ್ಗ ತಾಲೂಕಿನಲ್ಲಿ ವಿತರಿಸುತ್ತಿದ್ದು, ಎರಡನ್ನು ಬೆಂಗಳೂರಿನಲ್ಲಿ ವಿತರಿಸುತ್ತಿದ್ದೇವೆ. ಪ್ರಸ್ತುತ ತಂತ್ರಜ್ಞಾನದ ಶಿಕ್ಷಣದ ಪ್ರಾಮುಖ್ಯತೆ ಹೆಚ್ಚಾಗಿದೆ. ಸ್ಮಾರ್ಟ್ ಟಿವಿಯಲ್ಲಿ ವಿಜ್ಞಾನ, ಗಣಿತ, ಸಮಾಜವಿಜ್ಞಾನ ಪ್ರತಿ ವಿಷಯಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆವರಣದಲಲ್ಲಿ ಗಿಡಗಳನ್ನು ನೆಡಲಾಯಿತು. ಇ-ಪಾಠಶಾಲೆಯನ್ನು ಸಿಎಲ್ಟಿ ಟ್ರಸ್ಟ್‌ನ ಚೀಫ್ ಸೆಕ್ರೆಟರಿ ಧನುಶ್ರೀ ಉದ್ಘಾಟಿಸಿದರು. ಆಯನೂರು ಪ್ರೌಢಶಾಲೆ ಮುಖ್ಯ ಶಿಕ್ಷಕಿ ಕರಿಬಸಮ್ಮ, ಶಿವಮೊಗ್ಗ ಎಸ್‌ಬಿಐ ಶಾಖೆ ಮುಖ್ಯಸ್ಥ ವಿಜಯ್ ಸಾಹಿ, ಚೀಫ್ ಮ್ಯಾನೇಜರ್ ರಂಗಸ್ವಾಮಿ, ಡಯಟ್ ಉಪನ್ಯಾಸಕ ನಿರಂಜನಮೂರ್ತಿ, ಪ್ರಾಚಾರ್ಯ ಗಣೇಶ್, ಪ್ರೌಢಶಾಲೆ ಮುಖ್ಯಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ನಿಂಗಪ್ಪ ಇತರರಿದ್ದರು.