

ಬೆಂಗಳೂರು : ಕೇರಳದ ತ್ರಿಶೂರ್ ಜಿಲ್ಲೆ ಪುಥೂರ್‌ನಲ್ಲಿ ನೂತನವಾಗಿ ಆರಂಭಿಸುತ್ತಿರುವ ಜೈವಿಕ ಉದ್ಯಾನಕ್ಕೆ ಅಗತ್ಯ ನೈಪುಣ್ಯತೆ ಮತ್ತು ಜ್ಞಾನ ವಿನಿಮಯಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸಮ್ಮತಿಸಿದ್ದಾರೆ.
ವಿಕಾಸಸೌಧದಲ್ಲಿ ಗುರುವಾರ ಈಶ್ವರ ಖಂಡ್ರೆ ಅವರನ್ನು ಕೇರಳ ಅರಣ್ಯ ಸಚಿವ ಎ.ಕೆ. ಸಶೀಂದ್ರನ್ ಭೇಟಿ ಮಾಡಿದ್ದರು. ಕೇರಳದಲ್ಲಿ ಆರಂಭಿಸುತ್ತಿರುವ ಪ್ರಥಮ ಜೈವಿಕ ಉದ್ಯಾನದಲ್ಲಿ ವನ್ಯಜೀವಿ ಮತ್ತು ಪಕ್ಷಿಗಳ ನಿರ್ವಹಣೆಗೆ ತಾಂತ್ರಿಕ ನೈಪುಣ್ಯತೆ ವಿನಿಮಯ ಮಾಡಿಕೊಳ್ಳುವಂತೆ ಮನವಿ ಮಾಡಿದ್ದರು. ಇದಕ್ಕೆ ಈಶ್ವರ ಖಂಡ್ರೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ವಿಶ್ವವಿಖ್ಯಾತ ಮೃಗಾಲಯ ವಿನ್ಯಾಸಕಾರ ಆಸ್ಟ್ರೇಲಿಯಾದ ಜಾನ್ ಸಿಯೋ ಅವರಿಂದ ಕೇರಳದಲ್ಲಿ 136.8 ಎಕರೆ ಪ್ರದೇಶದಲ್ಲಿ ಜೈವಿಕ ಉದ್ಯಾನದ ವಿನ್ಯಾಸ ಮಾಡಲಾಗಿದೆ. ಆಗಸ್ಟ್ನಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಸಚಿವ ಸಶೀಂದ್ರನ್ ಮಾಹಿತಿ ನೀಡಿದರು. ಹೊಸ ಮೃಗಾಲಯಕ್ಕೆ ಕರ್ನಾಟಕದ ಮೃಗಾಲಯಗಳಲ್ಲಿ ಹೆಚ್ಚುವರಿಯಾಗಿರುವ ಕೆಲವು ವನ್ಯಜೀವಿಗಳನ್ನು ನೀಡುವಂತೆಯೂ ಮನವಿ ಮಾಡಿದ್ದಾರೆ.
ಕೇರಳದ ಡೀಮ್ಡ್ ಅರಣ್ಯ ಕುರಿತಂತೆ ಕೈಗೊಂಡಿರುವ ಕ್ರಮಗಳು, ಕಸ್ತೂರಿ ರಂಗನ್ ವರದಿ ಕುರಿತಂತೆ ಕೈಗೊಳ್ಳಲಾಗಿರುವ ನಿರ್ಣಯಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು. ಕೇರಳ ಅರಣ್ಯ ಇಲಾಖೆ ಮುಖ್ಯ ವನ್ಯಜೀವಿ ಪರಿಪಾಲಕ ಪ್ರಮೋದ್ ಜಿ. ಕೃಷ್ಣನ್ ಮತ್ತು ರಾಜ್ಯ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಾದ ಮೀನಾಕ್ಷಿ ನೇಗಿ, ಸುಭಾಷ್ ಮಲ್ಕಡೆ, ಸುನೀಲ್ ಪನ್ವಾರ್, ಸೂರ್ಯ ಸೇನ್ ಮತ್ತಿತರರು ಸಭೆಯಲ್ಲಿ ಭಾಗಿಯಾಗಿದ್ದರು.