

ಬೆಂಗಳೂರು: ಜೀವನದಲ್ಲಿ ಕಷ್ಟಕಾಲಗಳು ಬಹುತೇಕರಿಗೆ ಇದ್ದದ್ದೇ. ಅದರಲ್ಲೂ ಬಡ ಹಾಗೂ ಮಿಡಲ್ ಕ್ಲಾಸ್ ಜನರದ್ದು ದಿನನಿತ್ಯ ಹೋರಾಟವೇ ಸರಿ (Techie Life). ಜೀವನ ಸಾಗಿಸಲು ಒಂದು ಸೂರು ಇರುತ್ತೆ ನಿಜ. ಆದರೆ, ಒಳ್ಳೆಯ ದಿನಚರಿ ಮತ್ತು ಬದುಕಿನ ಹಾದಿ ಇರುವುದಿಲ್ಲ. ಕಂಡಿದ್ದು ತಿನ್ನಲು ಸಾಧ್ಯವಿಲ್ಲ, ಆಸೆ ಪಟ್ಟಿದ್ದು ಕೊಳ್ಳಲು ಹಣವಿಲ್ಲ. ಹೀಗೆ ನಾನಾ ರೀತಿಯ ಸಮಸ್ಯೆಗಳು ಕಾಡುತ್ತಿರುತ್ತದೆ. ಕುಟುಂಬದ ಆರ್ಥಿಕ ಬಿಕ್ಕಟ್ಟಿನಿಂದ ಕೆಲವರು ಒಳ್ಳೆಯ ವಿದ್ಯಾಭ್ಯಾಸ ಪಡೆಯದೆ, ಸಿಕ್ಕ ಸಿಕ್ಕ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುತ್ತಾರೆ. ಇನ್ನೂ ಕೆಲವರು ಓದಿಕೊಂಡಿದ್ದರೂ ಕೆಲಸ ಸಿಗದೆ, ಜೀವನವೇ ಬೇಡ ಎನ್ನುವಷ್ಟು ಹತಾಶೆಗೆ ಸಿಲುಕಿರುತ್ತಾರೆ. ಆದರೆ, ಬೆರಳಣಿಕೆಯಷ್ಟು ಜನ ಮಾತ್ರ ಇದನೆಲ್ಲ ಮೆಟ್ಟಿ, ತಮ್ಮ ಅದೃಷ್ಟವನ್ನೇ ಬದಲಿಸಿಕೊಳ್ಳುತ್ತಾರೆ. ಅಂತವರ ಸಾಲಿಗೆ ಈತನ ಕಥೆ ಕೂಡ ಸೇರಿದೆ.
'ಟೈಮ್ ಆಫ್ ಇಂಡಿಯಾ' ವರದಿ ಪ್ರಕಾರ, ಎಲ್ಲರಂತೆ ತಾನು ಕೂಡ ಆರ್ಥಿಕ ಸಂಕಷ್ಟದಲ್ಲಿದ್ದ 29 ವರ್ಷದ ಗುರ್ಗಾಂವ್ ಮೂಲದ ಟೆಕ್ಕಿ, ಪ್ರಸ್ತುತ ಅಮೆರಿಕದ ಹೆಸರಾಂತ ಸಾಫ್ಟ್ವೇರ್ ಕಂಪನಿಯಲ್ಲಿ ಉತ್ತಮ ಆದಾಯ ಬರುವಂತ ಉದ್ಯೋಗದಲ್ಲಿದ್ದಾನೆ. ಆರಂಭದಲ್ಲಿ ತಾನು ಅನುಭವಿಸಿದ ಕಷ್ಟಗಳನ್ನು 'ರೆಡ್ಡಿಟ್' ಎಂಬ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈತ, ಕಳೆದ 16 ತಿಂಗಳ ಹಿಂದೆ ಮಾಡಿದ ಉಳಿತಾಯದಿಂದ ಇಂದು ಜೀವನವೇ ಬದಲಾಗಿದೆ. ಖುಷಿ-ನೆಮ್ಮದಿಯ ಜೀವನಕ್ಕೆ ಪಾರಾವೇ ಇಲ್ಲ ಎನ್ನುವಂತಾಗಿದೆ ಎಂಬ ಪೋಸ್ಟ್ ಶೇರ್ ಮಾಡಿದ್ದಾನೆ. ಇದು ಕೆಲವರಿಗೆ ಸ್ಫೂರ್ತಿದಾಯಕವಾದರೆ, ಇನ್ನೂ ಕೆಲವರಿಗೆ ಅಚ್ಚರಿ ಮೂಡಿಸಿದೆ.
ಜೀವನದಲ್ಲಿ ಉಳಿತಾಯ ಮಾಡಬೇಕು ಎಂಬ ಶಿಸ್ತು, ಬದ್ಧತೆಯನ್ನು ಅಳವಡಿಸಿಕೊಂಡ ಬಳಿಕ ನಾನು ನನ್ನ ಗುರಿಯನ್ನು ಸಾಧಿಸಲು ಸಾಧ್ಯವಾಯಿತು. ಕೆಲವರು ವಿದೇಶಕ್ಕೆ ಬಂದು, ಹೆಚ್ಚಿನ ಸಂಬಳದ ಉದ್ಯೋಗ ಗಿಟ್ಟಿಸಿಕೊಂಡರೆ ಸಾಕು ಲಕ್ಸುರಿ ಜೀವನಶೈಲಿ ಬದುಕುಬಹುದು ಎಂದು ಭಾವಿಸಿದ್ದಾರೆ. ಆದರೆ, ಅದು ಸುಳ್ಳು. ಇಲ್ಲಿನ ಖುರ್ಚು-ವೆಚ್ಚಗಳು, ತೆರಿಗೆ ಮತ್ತು ಮನೆಯ ಬಾಡಿಗೆಗಳು ದುಬಾರಿ ಆಗಿವೆ. ಸಂಬಳ ಪಡೆಯುವುದು ಸುಲಭ. ಆದರೆ, ಅದರಲ್ಲಿ ಉಳಿತಾಯ ಮಾಡುವುದು ಸವಾಲೇ ನಿಜ ಎಂದು ಹೇಳಿದ್ದಾರೆ.
ಈತನ ಜೀವನದಲ್ಲಿ ದೊಡ್ಡ ಟರ್ನಿಂಗ್ ಪಾಯಿಂಟ್ ಆಗಿದ್ದು ಸಂಬಳದ ಚೆಕ್ ಅಲ್ಲವಂತೆ! ಬದಲಿಗೆ ಅಂದು ನಡೆದ ಘಟನೆಗಳು ಎಂದಿದ್ದಾರೆ. ತಮ್ಮ ಹೃದಯಕ್ಕೆ ಹತ್ತಿರವಾದ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ದಾಖಲಾಗಿ, ಹಲವು ತಿಂಗಳುಗಳಿಂದ ಅನಾರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂಬುದು ಒಂದು ಘಟನೆಯಾದರೆ. ಮತ್ತೊಂದು, ಗುರ್ಗಾಂವ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ಹಣವಿಲ್ಲದ ಕಾರಣ ಅಲ್ಲಿಂದ ಹೊರಗೆ ನಡೆದದ್ದು. ವೈದ್ಯರ ನೋಡಲು ಕನ್ಸಲ್ಟೇಷನ್ ಮೊತ್ತ 500 ರೂ. ಇರದ ಕಾರಣ, ನೋವಿನಲ್ಲೇ ಮನೆಗೆ ಹಿಂತಿರುಗಿದ್ದಾಗಿ ಹೇಳಿಕೊಂಡಿದ್ದಾರೆ.
ಅಂದು ಉಳಿತಾಯವಿರಲಿ, ಹಣವಿಲ್ಲದೆ ಪರದಾಡುತ್ತಿದ್ದ ಈತ ಇಂದು ಬರೋಬ್ಬರಿ 2 ಕೋಟಿ ರೂ. ಸೇವಿಂಗ್ಸ್ ಮಾಡಿಕೊಂಡಿದ್ದಾನೆ. ಅದು ಯುಎಸ್ ಸ್ಟಾಕ್ಸ್ನಲ್ಲಿ ಮಾಡಿದ ಹೂಡಿಕೆ ಎಂದಿದ್ದಾನೆ. ಕಳೆದ 16 ತಿಂಗಳಲ್ಲಿ ಇಷ್ಟು ಉಳಿತಾಯ ಮಾಡಿರುವ ವ್ಯಕ್ತಿ, ಆ ಹಣದಲ್ಲಿ ಇಲ್ಲಿಯವರೆಗೆ 25 ಲಕ್ಷ ರೂ. ಅನ್ನು ತನ್ನಿಷ್ಟದ ಜಾಗಗಳಿಗೆ ಪ್ರಯಾಣಿಸಲು ಬಳಿಸಿಕೊಂಡಿದ್ದಾಗಿ ಹೇಳಿದ್ದಾನೆ. ಬದುಕು ದೊಡ್ಡದಿಲ್ಲ. ಇಂದು ಇದ್ದೇವೆ, ನಾಳೆ ತಿಳಿಯದು? ಹೀಗಿರುವಾಗ ಪ್ರಯಾಣದ ಮುಖೇನ ಖುಷಿ ಕಾಣುತ್ತಿರುವೆ. ಒಂದೊಳ್ಳೆ ನೆನಪಿನ ಬುತ್ತಿಯನ್ನು ಕಟ್ಟಿಕೊಳ್ಳುವ ಪರಿ ಜೀವನವನ್ನು ಕಳೆಯಲು ಉತ್ಸಾಹ ನೀಡುತ್ತಿದೆ ಎಂದು ಬರೆದುಕೊಂಡಿದ್ದಾನೆ,(ಏಜೆನ್ಸೀಸ್).