

ಆಗ್ರಾ: ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಪತ್ನಿಯ ಕಿರುಕುಳಕ್ಕೆ ಬೇಸತ್ತು ಐಟಿ ಕಂಪನಿಯ ಮ್ಯಾನೇಜರ್ ಒಬ್ಬರು ವಿಡಿಯೋ ಮಾಡಿಟ್ಟು ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಮೃತರನ್ನು ಮಾನವ್ ಶರ್ಮಾ ಎಂದು ಗುರುತಿಸಲಾಗಿದ್ದು, ಇವರು ಐಟಿ ಕಂಪನಿ ಒಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆಯು ಆಗ್ರಾದ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತನ ತಂದೆ ನೀಡಿದ ದೂರನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಕರಣದ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಐಟಿ ಕಂಪನಿ ಒಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಮಾನ್ ಶರ್ಮಾ ಅವರು ಫೆಬ್ರವರಿ 24ರಂದು ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಸಾಯುವುದಕ್ಕೂ ಮೊದಲು ಮಾನವ್ ವಿಡಿಯೋ ಒಂದನ್ನು ಮಾಡಿದ್ದು, ಅದರಲ್ಲಿ ತಮ್ಮ ಪತ್ನಿಯಿಂದ ತಾವು ಅನುಭವಿಸುತ್ತಿರುವ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಮೃತರ ತಂದೆ ನೀಡಿರುವ ದೂರನ್ನು ಆಧರಿಸಿ ತನಿಖೆ ಆರಂಭಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.
ಮಾನವ್ ಅವರ ತಂದೆ ಮಾತನಾಡಿ, ಮಗನಿಗೆ ಕಳೆದ ವರ್ಷವಷ್ಟೇ ಮದುವೆಯಾಗಿತ್ತು. ಕೆಲಸದ ಕಾರಣ, ಮಗ ಸೊಸೆ ಇಬ್ಬರು ಮುಂಬೈಗೆ ಶಿಫ್ಟ್ ಆಗಿದ್ದರು. ಆದರೆ, ಸೊಸೆ ಪ್ರತಿದಿನ ಮಗನ ಜೊತೆ ಜಗಳವಾಡುತ್ತಿದ್ದಳು. ಇಷ್ಟೇ ಅಲ್ಲ, ಅವರು ಕುಟುಂಬವನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕುತ್ತಿದ್ದರು. ಫೆಬ್ರವರಿ ತಿಂಗಳಲ್ಲಿ ಇಬ್ಬರು ಆಗ್ರಾಗೆ ವಾಪಸ್ ಆಗಿದ್ದರು, ಆ ಬಳಿಕ ಆಕೆ ತನ್ನ ತವರು ಮನೆಗೆ ಹೋಗಿದ್ದಳು. ಇದಾದ ಬಳಿಕ ಮಗ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಂದೆ ಆರೋಪಿಸಿದ್ದಾರೆ.
ನನಗೆ ನನ್ನ ಹೆಂಡತಿಯಿಂದ ತುಂಬಾ ಬೇಸರವಾಗಿದೆ, ಸಾವನ್ನು ಬಿಟ್ಟು ಬೇರೆ ದಾರಿಯಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಮಾತನಾಡಿರುವ ಮಾನವ್ ಪುರುಷರನ್ನು ರಕ್ಷಿಸಲು ಕಾನೂನುಗಳನ್ನು ರಚಿಸಬೇಕು. ಅಪ್ಪಾ, ಅಮ್ಮ ನನ್ನನ್ನು ಕ್ಷಮಿಸಿ, ಹೆತ್ತವರಿಗೆ ಯಾರೂ ಕೂಡ ತೊಂದರೆ ಕೊಡಬೇಡಿ, ನಾನು ನನ್ನ ಕರ್ತವ್ಯಕ್ಕೆ ರಜೆ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.