ಪ್ರೀತಿಯ ತಂದೆಗೆ ಸರ್ಪ್ರೈಸ್ ಆಗಿ ಬುಲೆಟ್ ಬೈಕ್​​ ಗಿಫ್ಟ್​ ಕೊಡಲು ಊರಿಗೆ ಬರ್ತಿದ್ದ ಯುವತಿ ದುರಂತ ಸಾವು! Techie Death

Techie Death
Published on

Techie Death : ತನ್ನ ಪ್ರೀತಿಯ ತಂದೆಗೆ ಸರ್ಪ್ರೈಸ್​ ಉಡುಗೊರೆ ಕೊಡಲು ಮನೆಗೆ ಆಗಮಿಸುತ್ತಿದ್ದ ಮಗಳು ದುರಂತ ಸಾವಿಗೀಡಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಶುಕ್ರವಾರ (ಏಪ್ರಿಲ್​ 25) ಮಧ್ಯರಾತ್ರಿ ಸೂರ್ಯಪೇಟೆ ಜಿಲ್ಲೆಯ ಮುನಗಲ ಮಂಡಲದ ಆಕುಪಮುಲದ ಗ್ರಾಮದ ಬಳಿ ಇರುವ ವಿಜಯವಾಡ-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪಶ್ಚಿಮ ಗೋದಾವರಿ ಜಿಲ್ಲೆಯ ಯುವತಿ ದುರಂತ ಸಾವಿಗೀಡಾಗಿದ್ದಾಳೆ.

ಮೃತಳನ್ನು ಭೀಮಾವರಂ ಮಂಡಲದ ತುಂಡುರು ಗ್ರಾಮದ ಚೆಡೆ ಜನಾರ್ದನ್ ಅವರ ಪುತ್ರಿ ಯಶಸ್ವಿನಿ (24) ಎಂದು ಗುರುತಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಹೈದರಾಬಾದ್‌ನ ಖಾಸಗಿ ಕಂಪನಿಯಲ್ಲಿ ಯಶಸ್ವಿನಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

ಯಶಸ್ವಿನಿ ತನ್ನ ತಂದೆಗೆ ಉಡುಗೊರೆಯಾಗಿ ಬುಲೆಟ್ ಬೈಕ್ ಒಂದನ್ನು ಖರೀದಿಸಿದ್ದಳು. ಶುಕ್ರವಾರ ರಾತ್ರಿ ತನ್ನ ಸಹೋದ್ಯೋಗಿ ಅಚ್ಯುತ್​ ಕುಮಾರ್ ಜೊತೆ ಅದೇ ಬುಲೆಟ್​ನಲ್ಲಿ ತಮ್ಮ ಊರು ತುಂಡುರ್ರಿಗೆ ಹೊರಟಳು. ಅಚ್ಯುತ್​ ಕುಮಾರ್ ಬುಲೆಟ್ ಬೈಕ್ ಸವಾರಿ ಮಾಡುತ್ತಿದ್ದರು.

ಬೈಕ್​, ಆಕುಪಮುಲಾದ ಹೊರವಲಯವನ್ನು ತಲುಪುತ್ತಿದ್ದಂತೆ, ಹೆದ್ದಾರಿಯಲ್ಲಿ ಬಿದ್ದಿದ್ದ ಕಾಡೆಮ್ಮೆಯ ಮೃತದೇಹಕ್ಕೆ​ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ, ಯಶಸ್ವಿನಿ ಬುಲೆಟ್​ನಿಂದ ಹಾರಿ ರಸ್ತೆಗೆ ಬಿದ್ದಳು. ಅದೇ ಸಮಯದಲ್ಲಿ, ಹೈದರಾಬಾದ್​ನಿಂದ ವಿಜಯವಾಡಕ್ಕೆ ಹೋಗುತ್ತಿದ್ದ ಲಾರಿಯೊಂದು ಅತಿ ವೇಗವಾಗಿ ಬಂದು ರಸ್ತೆಯಲ್ಲಿ ಬಿದ್ದಿದ್ದ ಯಶಸ್ವಿನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಯಶಸ್ವಿನಿ ತಲೆ ಮತ್ತು ಕುತ್ತಿಗೆಗೆ ಗಂಭೀರ ಪೆಟ್ಟಾಗಿ, ಆಕೆ ಸ್ಥಳದಲ್ಲೇ ಮೃತಪಟ್ಟಳು.

ಅಚ್ಯುತ್​ ಕುಮಾರ್​ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮಾಹಿತಿ ಪಡೆದ ಮುನಗಲ ಪೊಲೀಸರು ಸ್ಥಳಕ್ಕೆ ತಲುಪಿ ಯಶಸ್ವಿನಿ ಮೃತದೇಹವನ್ನು ಕೊಡಾಡ್ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ ಮೃತರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಶನಿವಾರ ಮೃತರ ಕುಟುಂಬ ಸದಸ್ಯರು ಮುನಗಲ ತಲುಪಿದರು. ಮೃತಳ ಮಾವ ಸುರೇಶ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಯಶಸ್ವಿನಿ ಮೃತದೇಹವನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದ್ದು, ಹುಟ್ಟೂರಿನಲ್ಲಿ ಅಂತಿಮ ಕ್ರಿಯೆ ನೆರವೇರಿದೆ. ಮಗಳನ್ನು ಕಳೆದುಕೊಂಡು ದುಃಖ ಸಾಗರದಲ್ಲಿ ಮುಳುಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net