

ಬೆಂಗಳೂರು; ಶರಣ್ ಚಿಕ್ಕಂದಿನಿಂದಲೂ ಹಾರಾರ್ ಚಿತ್ರಗಳ ಅಭಿಮಾನಿಯಂತೆ. ಸಾಕಷ್ಟು ಹಾರಾರ್ ಚಿತ್ರಗಳನ್ನೂ ನೋಡಿದ್ದರಂತೆ. ಆದರೆ, ಒಂದು ಪಕ್ಕಾ ಹಾರರ್ ಚಿತ್ರದಲ್ಲಿ ಅವರು ನಟಿಸಿರಲಿಲ್ಲ. ಈಗ ಅಂಥದ್ದೊಂದು ಅವಕಾಶ ಅವರಿಗೆ 'ಛೂ ಮಂತರ್' ಚಿತ್ರದಲ್ಲಿ ಸಿಕ್ಕಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗೆ ಟೀಸರ್ ಸಹ ಬಿಡುಗಡೆಯಾಗಿದೆ.
ಒಂದು ಸಣ್ಣ ಗ್ಯಾಪ್ನ ನಂತರ ಶರಣ್ ಮತ್ತು ಚಿಕ್ಕಣ್ಣ ಈ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದಾರೆ. 'ನನ್ನ ಹಾಗೂ ಚಿಕ್ಕಣ್ಣ ಅವರ ಕಾಂಬಿನೇಶನ್ ಎಂದರೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇರುತ್ತದೆ. ಈ ಚಿತ್ರದಲ್ಲೂ ನಮ್ಮ ಜೋಡಿ ಮೋಡಿ ಮಾಡಲಿದೆ. ಈ ಚಿತ್ರದ ಮತ್ತೊಂದು ಹೈಲೆಟ್ ಎಂದರೆ ಅನೂಪ್ ಅವರ ಛಾಯಾಗ್ರಹಣ' ಎನ್ನುತ್ತಾರೆ ಶರಣ್.
ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಅದಿತಿ ಪ್ರಭುದೇವ ಮತ್ತು ಮೇಘನಾ ಗಾಂವ್ಕರ್ ಮೊದಲ ಬಾರಿಗೆ ಶರಣ್ ಜತೆಗೆ ನಟಿಸಿದ್ದಾರೆ. 'ತರುಣ್ ಶಿವಪ್ಪ ನಿರ್ಮಾಣದ ಹಿಂದಿನ ಚಿತ್ರದಲ್ಲೇ ಅಭಿನಯಿಸಬೇಕಿತ್ತು ಆಗಿರಲಿಲ್ಲ. ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ' ಎಂದು ಮೇಘನಾ ಖುಷಿಪಟ್ಟರೆ, ನನಗೂ ಹಾರಾರ್ ಚಿತ್ರಗಳೆಂದರೆ ಪ್ರಾಣ ಎನ್ನುತ್ತಾರೆ ಅದಿತಿ.
'ಛೂ ಮಂತರ್' ಚಿತ್ರಕ್ಕಾಗಿ ಬೆಂಗಳೂರು, ಮೈಸೂರು, ಉತ್ತರಕಾಂಡದಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಪ್ರಭು ಮುಂಡ್ಕರ್, ಮೇಘನಾ ಗಾಂವ್ಕರ್, ಧರ್ಮ, ರಜನಿ ಭಾರದ್ವಾಜ್ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಚಂದನ್ ಶೆಟ್ಟಿ ಸಂಗೀತ ಈ ಚಿತ್ರಕ್ಕಿದೆ.