ಗೆಲುವಿಗೆ ಕಣ್ಣೀರು, ಸುಳ್ಳೇ ಕಾರಣ; ಎಚ್‌ಡಿಕೆ ವಿರುದ್ಧ ಸಿಪಿವೈ ಆರೋಪ ಅಭಿವೃದ್ಧಿಗೆ ಮಾಜಿ ಸಿಎಂ ಕೊಡುಗೆ ಏನಿಲ್ಲ

Published on

ಚನ್ನಪಟ್ಟಣ: ನನ್ನ ಹೃದಯ ವೀಕ್ ಆಗಿದೆ ಎಂದು ಕಣ್ಣೀರು ಹಾಕಿ, ಸುಳ್ಳು ಭರವಸೆಗಳನ್ನು ನೀಡಿ ಕಳೆದ ಚುನಾವಣೆಯಲ್ಲಿ ನಯವಂಚಕತನದಿಂದ ಗೆದ್ದ ಕುಮಾರಸ್ವಾಮಿ ಅವರ ಕೊಡುಗೆ ತಾಲೂಕಿಗೆ ಏನೂ ಇಲ್ಲ. ಕ್ಷೇತ್ರಕ್ಕೆ ಯಾವುದೇ ಶಾಶ್ವತ ಯೋಜನೆಗಳನ್ನು ನೀಡಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಆರೋಪಿಸಿದರು.

ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಪೂಜೆ ಸಲ್ಲಿಸಿ ಸ್ವಾಭಿಮಾನ ಸಂಕಲ್ಪ ನಡಿಗೆಗೆ ಚಾಲನೆ ನೀಡಿ, ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಕುಮಾರಸ್ವಾಮಿ ಆಯ್ಕೆಯಾದರೆ ಕ್ಷೇತ್ರ ಹೆಚ್ಚು ಅಭಿವೃದ್ಧಿಯಾಗುತ್ತದೆ ಎಂದು ನಂಬಿ ಜನ ಅವರನ್ನು ಆಯ್ಕೆ ಮಾಡಿದರು. ಗೆದ್ದ ನಂತರ ತಾಲೂಕಿನ ಜನರ ಕಷ್ಟ ಪರಿಹರಿಸುವ ಕೆಲಸ ಮಾಡಲಿಲ್ಲ. ಅವರ ನೋವಿಗೆ ಸ್ಪಂದಿಸಿ ಕಣ್ಣೀರು ಒರೆಸುವ ಕೆಲಸ ಮಾಡಲಿಲ್ಲ ಎಂದು ದೂರಿದರು.

ರಾಜಕೀಯ ನಿವೃತ್ತಿ ಪಡೆಯುವೆ: ಕುಮಾರಸ್ವಾಮಿ ಕಳೆದ ಚುನಾವಣೆಯಲ್ಲಿ ಸುಳ್ಳು ಭರವಸೆಗಳನ್ನು ನೀಡಿ, ವಾಮಮಾರ್ಗದಿಂದ ಗೆಲುವು ಸಾಧಿಸಿದರಾದರೂ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಅವರ ಅವಧಿಯಲ್ಲಿ ಕ್ಷೇತ್ರದಲ್ಲಿ ಹೇಳುವಂಥ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಕುಮಾರಸ್ವಾಮಿ ಅವರು ಮಾತೆತ್ತಿದರೆ ಕ್ಷೇತ್ರಕ್ಕೆ 1500 ಕೋಟಿ ರೂ. ಅನುದಾನ ತಂದಿದ್ದೇನೆ ಅನ್ನುತ್ತಾರೆ. ಹಾಗಿದ್ದರೆ ಈ ಅನುದಾನ ಎಲ್ಲಿ ಹೋಯಿತು. ಕಿತ್ತೋದ ರಸ್ತೆಗಳಿಗೆ 1500 ಕೋಟಿ ಅನುದಾನ ಖರ್ಚಾಯಿತಾ ಎಂದು ಪ್ರಶ್ನಿಸಿದ ಸಿಪಿವೈ, ಒಂದಿಬ್ಬರು ಗುತ್ತಿಗೆದಾರಿಗೆ ತಾಲೂಕನ್ನು ಅಡವಿಟ್ಟು, ಅವರು ಕೊಟ್ಟ ಹಣದಲ್ಲಿ ದಂಧೆ ಮಾಡುತ್ತಿದ್ದಾರೆ. ಅವರು ಹೇಳುವಂತೆ ಕ್ಷೇತ್ರದಲ್ಲಿ ಯಾವುದಾದರೂ ಒಂದು ಶಾಶ್ವತ ಕೆಲಸವಾಗಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.

ಕುಮಾರಸ್ವಾಮಿ ಆಯ್ಕೆಯಾದ ನಂತರ ಕ್ಷೇತ್ರದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಭ್ರಷ್ಟಾಚಾರ, ಗೂಂಡಾಗಿರಿ, ದೌರ್ಜನ್ಯಗಳು ಹೆಚ್ಚಾಗಿವೆ. ತಾಲೂಕಿನ ಜನಪ್ರತಿನಿಧಿಯಾಗಿ ಕಳಕಳಿಯಿಂದ ಕೆಲಸ ಮಾಡದ ಕಾರಣ ತಾಲೂಕಿನ ಆಡಳಿತ ಹಳಿ ತಪ್ಪಿದೆ. ಗೆದ್ದ ನಂತರ ಕುಮಾರಸ್ವಾಮಿ ಅವರು ಎಷ್ಟು ಬಾರಿ ಕ್ಷೇತ್ರಕ್ಕೆ ಬಂದು ಹೋಗಿದ್ದಾರೆ ಎಂದು ಪ್ರಶ್ನಿಸಿದ ಯೋಗೇಶ್ವರ್, ಸಿಎಂ ಆಗಿದ್ದ 14 ತಿಂಗಳ ಅವಧಿಯಲ್ಲಿ ಒಂದು ಬಾರಿಯೂ ಕ್ಷೇತ್ರಕ್ಕೆ ಬರಲಿಲ್ಲ. ಕಳೆದ ಬಾರಿ ಅವರ ಕಣ್ಣೀರಿಗೆ ಮರುಗಿದ ಜನ ಅವರನ್ನು ಆರಿಸಿ ಕಳುಹಿಸಿದರು, ಆದರೆ, ಈಬಾರಿ ಅಂತಹ ಪರಿಸ್ಥಿತಿ ಇಲ್ಲ. ಪ್ರತಿ ಚುನಾವಣೆಯಲ್ಲೂ ಮಂಕುಬೂದಿ ಎರಚುವ ಅವರ ಆಟ ನಡೆಯುವುದಿಲ್ಲ ಎಂದು ಗುಡುಗಿದರು.

ದಶಕಗಳಿಂದ ಜೆಡಿಎಸ್ ನಿಷ್ಠಾವಂತರಾಗಿ ಗುರುತಿಸಿಕೊಂಡಿದ್ದ ಅನೇಕರು, ಕುಮಾರಸ್ವಾಮಿ ಕಾರ್ಯವೈಖರಿಯಿಂದ ಬೇಸತ್ತು ಬಿಜೆಪಿ ತತ್ವ ಸಿದ್ಧಾಂತ ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮುಖಂಡರು, ಕಾರ್ಯಕರ್ತರು ಜೆಡಿಎಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎಂದು ಸಿಪಿವೈ ಹೇಳಿದರು.

ಬಿಜೆಪಿಯಿಂದ ಕ್ಷೇತ್ರದ ಅಭಿವೃದ್ಧಿ: ತಾಲೂಕಿನ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದವನು ನಾನು. ಇದರೊಂದಿಗೆ ಸರ್ಕಾರಿ ಬಸ್ ನಿಲ್ದಾಣ, ಕೋರ್ಟ್, ಅಂಬೇಡ್ಕರ್ ಭವನ ಎಲ್ಲವೂ ನನ್ನ ಶ್ರಮ. ಕುಮಾರಸ್ವಾಮಿ ಕೊಡುಗೆ ನಯಾಪೈಸೆ ಇಲ್ಲ. ಈ ತಾಲೂಕು ಅಭಿವೃದ್ಧಿಯಾಗಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ಕುಮಾರಸ್ವಾಮಿ ಅವರಿಗೆ ತಾಲೂಕಿನ ಸರಿಯಾದ ಪರಿಚಯವೇ ಇಲ್ಲ. ಚನ್ನಪಟ್ಟಣ ನನ್ನ ಕರ್ಮಭೂಮಿ, ಇಲ್ಲಿನ ಜನರ ನಾಡಿಮಿಡಿತ ನನಗೆ ಗೊತ್ತಿದೆ. ಬೇಕಿದ್ದರೆ ನಾನು ತಾಲೂಕಿನ 20 ಸಾವಿರ ಜನರ ಹೆಸರು ಹೇಳಬಲ್ಲೆ. ಆದರೆ ಕುಮಾರಸ್ವಾಮಿ ತಾಲೂಕಿನ 10 ಗ್ರಾಮಗಳ ಹೆಸರು, 10 ಜನ ಮುಖಂಡರ ಹೆಸರು ಹೇಳಲಿ ನೋಡೋಣ ಎಂದು ಸಿಪಿವೈ ಸವಾಲು ಎಸೆದರು.

ಮಗನಿಗೆ ರಾಮನಗರ, ಬೀಗರಿಗೆ ಮದ್ದೂರು ಧಾರೆ: ಕುಮಾರಸ್ವಾಮಿಗೆ ರಾಮನಗರದ ಶಾಸಕ ಸ್ಥಾನ ಸಾಕಾಗಲಿಲ್ಲ ಎಂದು ಚನ್ನಪಟ್ಟಣಕ್ಕೆ ಬಂದರು. ಇಲ್ಲಿ ಗೆದ್ದ ಮೇಲೆ ಈಗ ರಾಮನಗರದಲ್ಲಿ ಮಗನನ್ನು ಪ್ರತಿಷ್ಠಾಪಿಸಿಲು ಹೊರಟಿದ್ದಾರೆ. ಮದ್ದೂರನ್ನು ಬೀಗರಿಗೆ ಧಾರೆ ಎರೆದಿದ್ದಾರೆ. ಯಾವುದೇ ಸಾಮಾನ್ಯ ಕಾರ್ಯಕರ್ತ ಬೆಳೆಯುವುದು ಇವರಿಗೆ ಬೇಕಿಲ್ಲ. ಅವರ ಈ ಧೋರಣೆಯಿಂದಾಗಿಯೇ ದಶಕಗಳ ಕಾಲ ನನ್ನ ವಿರುದ್ಧ ಹೋರಾಡಿದರು ಇಂದು ಜೆಡಿಎಸ್ ತೊರೆದು ನನ್ನೊಂದಿಗೆ ನಿಂತಿದ್ದಾರೆ ಎಂದು ಯೋಗೇಶ್ವರ್ ಹೇಳಿದರು.

20ಕ್ಕಿಂತ ಹೆಚ್ಚು ಸ್ಥಾನ ಬರಲ್ಲ: ಮುಖ್ಯಮಂತ್ರಿಯಾಗುವ ಕನಸಿ ನೊಂದಿಗೆ ಕುಮಾರಸ್ವಾಮಿ ರಾಜ್ಯದಲ್ಲಿ ಪಂಚರತ್ನ ರಥಯಾತ್ರೆ ಮಾಡುತ್ತಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಮುಂದಿನ ಬಾರಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಯೋಗೇಶ್ವರ್ ಭವಿಷ್ಯ ನುಡಿದರು. ಜೆಡಿಎಸ್‌ಗೆ 20 ಸ್ಥಾನಗಳಿಗಿಂತ ಹೆಚ್ಚು ಸ್ಥಾನ ಬರುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net