

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಈ ವರ್ಷ ಮಳೆ ಕೊರತೆ ಎದುರಾಗಿದ್ದು ಬರದ ಪರಿಸ್ಥಿತಿ ಎದುರಾಗುವ ಭೀತಿ ಇದೆ. ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ತಂಡಗಳನ್ನು ರಚನೆ ಮಾಡಿ ಜಿಲ್ಲೆಗೆ ಕಳುಹಿಸಿದ್ದು ಸರ್ವೇ ಕಾರ್ಯ ಕೈಗೊಳ್ಳಲಿದ್ದಾರೆ.
ಜಿಲ್ಲೆಯ ಮೂರು ತಾಲೂಕುಗಳ ಪೈಕಿ 48 ಹಳ್ಳಿಗಳಲ್ಲಿ ಸರ್ವೇ ಮಾಡಲು ಗುರುತಿಸಲಾಗಿದೆ. ಕಡೂರು ತಾಲೂಕಿನ 32, ಅಜ್ಜಂಪುರ 11, ಶೃಂಗೇರಿಯ 5 ಗ್ರಾಮಗಳನ್ನು ಗುರುತಿಸಲಾಗಿದೆ. ತಂಡದ ಅಧಿಕಾರಿಗಳು ಭೇಟಿ ನೀಡಿ ಸರ್ವೇ ಮಾಡಲಿದ್ದಾರೆ.
ಪ್ರಮುಖವಾಗಿ 5 ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಮೊಬೈಲ್ ಆಪ್‌ನಲ್ಲಿ ಬೆಳೆ ಪರಿಸ್ಥಿತಿಯ ಬಗ್ಗೆ ಕಳೆದ ವರ್ಷಕ್ಕೆ ಹೊಲಿಕೆ ಮಾಡಿದರೆ ಈ ಬಾರಿ ಮಳೆ ಕೊರತೆ ಹೆಚ್ಚಾಗಿದೆ. ವಾರ್ಷಿಕವಾಗಿ 1424 ಮೀ.ಮೀ.ನಷ್ಟು ಮಳೆ ಆಗಬೇಕಿತ್ತು. ಆದರೆ ಕೇವಲ 840 ಮೀ.ಮೀ. ಮಳೆಯಾಗಿದ್ದು ಶೇ.41ರಷ್ಟು ಮಳೆ ಕೊರತೆಯಾಗಿದೆ.
ಕಳೆದ ವರ್ಷ 77 ಸಾವಿರ ಹೆಕ್ಟೇರ್ ಬಿತ್ತನೆ ಗುರಿಯಿತ್ತು. ಈ ಬಾರಿ 98 ಸಾವಿರ ಹೆಕ್ಟೇರ್ ಪ್ರದೇಶದ ಪೈಕಿ ಶೇ.73ರಷ್ಟು ಮಾತ್ರ ಬಿತ್ತನೆಯಾಗಿದ್ದು ಹೊಲದಲ್ಲೇ ಬಾಡುತ್ತಿವೆ.
ಜಿಲ್ಲೆಯಲ್ಲಿ ಒಟ್ಟು 98,356 ಕೃಷಿ ಪ್ರದೇಶದ ಗುರಿಯಿದ್ದು, ಆ ಪೈಕಿ ಏಕದಳ ಧಾನ್ಯಗಳು 64,165 ಹೆಕ್ಟೇರ್, ದ್ವಿದಳ 2,275 ಹೆಕ್ಟೇರ್, ಎಣ್ಣೆ ಕಾಳುಗಳು 3,164 ಹೆಕ್ಟೇರ್, ವಾಣಿಜ್ಯ ಬೆಳೆಗಳು 2,526 ಹೆಕ್ಟೇರ್ ಸೇರಿದಂತೆ ಒಟ್ಟು 72,131 ಗುರಿ ಸಾಧನೆಯಾಗಿದೆ. ಜಿಲ್ಲೆಯ ಮಲೆನಾಡು ಭಾಗವಾದ ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಮೂಡಿಗೆರೆ ಭಾಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿದ್ದು ಬಯಲುಸೀಮೆಯ ತರೀಕೆರೆ, ಕಡೂರು, ಅಜ್ಜಂಪುರ ತಾಲೂಕುಗಳಲ್ಲಿ ಮಳೆ ಕೊರತೆಯಾಗಿದೆ.
ಜಿಲ್ಲೆಯಲ್ಲಿ ಪ್ರತಿವರ್ಷ ವಾಡಿಕೆ ಮಳೆ 1424 ಮೀ.ಮೀ.ನಷ್ಟು ಆಗಬೇಕಿತ್ತು. ಆದರೆ ಈ ಬಾರಿ ಕೇವಲ 840 ಮೀ.ಮೀ. ಆಗಿದ್ದು ಶೇ.41ರಷ್ಟು ಮಳೆ ಕೊರತೆ ಎದುರಾಗಿದೆ. ಜಿಲ್ಲೆಯ ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ ಭಾಗದಲ್ಲಿ ಶೇಕಡವಾರು ಮಳೆಯಾಗಿದ್ದು ಚಿಕ್ಕಮಗಳೂರು, ಕಡೂರು, ತರೀಕೆರೆ, ಅಜ್ಜಂಪುರ ಪ್ರದೇಶದಲ್ಲಿ ತೀವ್ರ ಮಳೆ ಕೊರತೆಯಾಗಿದೆ. ಜಿಲ್ಲೆಯಲ್ಲಿ ನಿರೀಕ್ಷೆಯಂತೆ ಮಳೆಯಾಗುತ್ತಿಲ್ಲ. ಕಳೆದ ಒಂದು ವಾರದ ಹಿಂದೆ ಬಿದ್ದ ಅಲ್ಪಸ್ವಲ್ಪ ಮಳೆಯನ್ನು ನಂಬಿ ಬಿತ್ತನೆ ಮಾಡಿದ್ದ ರೈತರು ಈಗ ಆಕಾಶ ನೋಡುವಂತಾಗಿದೆ. ಇನ್ನೇನು ಬಿತ್ತನೆಯಾಗಿ ಒಳ್ಳೆಯ ಬೆಳೆ ಬರುವ ನಿರೀಕ್ಷೆಯಲ್ಲಿದ್ದ ರೈತರಿಗೆ ದಿಕ್ಕೆ ತೋಚದಂತಾಗಿದೆ. ಬಿತ್ತಿದ್ದ ಬೆಳೆ ಚಿಗುರೊಡೆಯದೇ ನೆಲದಲ್ಲೆ ಕಮರುತ್ತಿದೆ.
ಸದ್ಯ ಜಿಲ್ಲೆಯಲ್ಲಿ ಇದುವರೆಗೂ ಶೇ.73ರಷ್ಟು ಬಿತ್ತನೆಯಾಗಿದೆಯಾದರೂ ಮಳೆ ಕೈಕೊಟ್ಟಿರುವುದರಿಂದ ಬಿತ್ತನೆಯಾಗಿರುವ ಬೆಳೆ ಹೊಲಗಳಲ್ಲಿ ಕಮರುತ್ತಿದೆ. ಮಳೆಗೆ ಉತ್ತಮವಾಗಿ ಬಿತ್ತನೆಯಾಗಿದ್ದರೂ ತೇವಾಂಶವಿಲ್ಲದೆ ಸೊರಗುತ್ತಿವೆ. ಮುಂದೆ ಯಾವ ರೀತಿ ಮಳೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಒಂದು ವೇಳೆ ಅಕ್ಟೋಬರ್‌ನಲ್ಲಿ ಹಿಂಗಾರು ಮಳೆ ಕೈಕೊಟ್ಟರೆ ಪರಿಸ್ಥಿತಿ ಏನಾಗಬಹುದು ಎಂಬ ಭೀತಿ ಎದುರಾಗಿದೆ. ಈಗಾಗಲೇ ರೈತರಿಂದ ಬರಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ವಿವಿಧ ಸಂಘಸಂಸ್ಥೆಗಳಿಂದ ಒತ್ತಾಯಗಳು ಕೇಳಿ ಬರುತ್ತಿವೆ.
ಜಿಲ್ಲೆಯಲ್ಲಿ 48 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಐದು ಬೆಳೆಗಳನ್ನು ಗುರುತಿಸಿ ಕಂದಾಯ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಲಿದ್ದಾರೆ. ಸರ್ವೇ ಮುಗಿಸಿ ವರದಿ ತಯಾರಿಸಿದ ಮೇಲೆ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಕಳುಹಿಕೊಡಲಾಗುವುದು.
ಎಷ್ಟು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ, ಒಣಗುತ್ತಿರುವ ಬೆಳೆ, ಮಳೆ ಕೊರತೆ ಪ್ರಮಾಣ, ನೀರಿನ ಪರಿಸ್ಥಿತಿ ಬಗ್ಗೆ ಸರ್ವೇ ಮಾಡಲಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಕನಕ ರೆಡ್ಡಿ ತಿಳಿಸಿದ್ದಾರೆ.