

ಹನಗೋಡು: ಮುಂಬರುವ ಶೈಕ್ಷಣಿಕ ವರ್ಷದಿಂದ ಗಿರಿಜನ ಆಶ್ರಮ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಪ್ರಾರಂಭಿಸುವ ಚಿಂತನೆ ಇದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಕಲ್ಲೇಶ್ ತಿಳಿಸಿದರು.
ಹನಗೋಡು ಹೋಬಳಿಯ ನಲ್ಲೂರು ಪಾಲಾ ಗಿರಿಜನ ಆಶ್ರಮ ಶಾಲೆಯಲ್ಲಿ ಪ್ರಥಮ್ ಮೈಸೂರು ಸಂಸ್ಥೆಯ ಸಹಯೋಗದಲ್ಲಿ ಶನಿವಾರ ಮೈಸೂರು ವಿಭಾಗ ಮಟ್ಟದ ಆಶ್ರಮ ಶಾಲೆಗಳ ಶಿಕ್ಷಕರಿಗೆ ಆಯೋಜಿಸಿದ್ದ ನಾಲ್ಕು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಆಶ್ರಮ ಶಾಲಾ ಶಿಕ್ಷಕರಿಗೆ ಆಂಗ್ಲ ಭಾಷೆ ತರಬೇತಿ ನೀಡಲಾಗುವುದು. ಇಲ್ಲಿ ಕಲಿತ ವಿದ್ಯಾರ್ಥಿಗಳನ್ನು ಮುರಾರ್ಜಿ ದೇಸಾಯಿ, ಆದರ್ಶ ಶಾಲೆಗಳಲ್ಲಿ ಆರನೇ ತರಗತಿಗೆ ನೇರವಾಗಿ ದಾಖಲಿಸಿಕೊಳ್ಳುವ ಚಿಂತನೆ ನಡೆದಿದೆ. ರಾಜ್ಯದ 119 ಆಶ್ರಮ ಶಾಲಾ ಶಿಕ್ಷಕರಿಗೆ ಈ ನಿಟ್ಟಿನಲ್ಲಿ ಕಾಲಕ್ಕೆ ತಕ್ಕಂತೆ ಪುನಶ್ಚೇತನ ತರಬೇತಿ ಶಿಬಿರ ನಡೆಯಲಿವೆ ಎಂದರು.
ಶಾಲೆಯಲ್ಲೇ ಉಳಿದು ವಿಶೇಷ ತರಗತಿ ನಡೆಸುವ ಶಿಕ್ಷಕರಿಗೆ ಪ್ರತಿ ತಿಂಗಳು 3,350 ರೂ. ಗೌರವಧನ, 3,000 ರೂ. ಸಾರಿಗೆ ಭತ್ಯೆ ಸೇರಿ 6350 ರೂ. ಹೆಚ್ಚುವರಿಯಾಗಿ ನೀಡಲಾಗುತ್ತದೆ ಎಂದರು. ಶಿಕ್ಷಣ ಇಲಾಖೆಯಲ್ಲಿ ನೀಡುವಂತೆ ಆಶ್ರಮ ಶಾಲಾ ಶಿಕ್ಷಕರಿಗೂ ಇಲಾಖಾ ವತಿಯಿಂದಲೇ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಲು ಹಾಗೂ ದೈಹಿಕ ಶಿಕ್ಷಣ ಶಿಕ್ಷಕ, ನರ್ಸ್, ಕಾವಲುಗಾರರನ್ನು ನೇಮಿಸಲು ಅಗತ್ಯ ಕ್ರಮವಹಿಸುವುದಾಗಿ ಕಲ್ಲೇಶ್ ತಿಳಿಸಿದರು.ಜಿಲ್ಲಾ ಯೋಜನಾ ಸಮನ್ವಯ ಅಧಿಕಾರಿ ಮುನಿರಾಜ್ ಇದ್ದರು. ಹಾಸನ, ಮಂಡ್ಯ, ತುಮಕೂರು, ಶಿವಮೊಗ್ಗ, ಮೈಸೂರು ಜಿಲ್ಲೆಯ ಒಟ್ಟು 137 ಶಿಕ್ಷಕರು ಭಾಗವಹಿಸಿದ್ದರು.