ವ್ಯವಸ್ಥಿತ ಸಮಾಜದ ರಚನೆಯಲ್ಲಿ ಶಿಕ್ಷಕರ ಪಾತ್ರ ದೊಡ್ಡದು

sgr teacher
ಸಾಗರದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್ ಉದ್ಘಾಟಿಸಿದರು. ಮೈತ್ರಿ ಪಾಟೀಲ್, ಮಾಲತೇಶ್, ಸವಿತಾ ವಾಸು, ಪರಶುರಾಮಪ್ಪ, ಎನ್.ಸಂತೋಷಕುಮಾರ್ ಇತರರಿದ್ದರು.
Published on

ಸಾಗರ: ಸಮಾಜವನ್ನು ವ್ಯವಸ್ಥಿತವಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡದು. ಶಿಕ್ಷಕರ ಬಗ್ಗೆ ಸಮಾಜ ಹೆಚ್ಚು ಕಾಳಜಿ ವಹಿಸಬೇಕು. ಸರ್ಕಾರಗಳು ಕೂಡ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್ ಹೇಳಿದರು.

ಸಾಗರದ ರಾಘವೇಶ್ವರ ಸಭಾಭವನದಲ್ಲಿ ಶುಕ್ರವಾರ ಬಿಇಒ ಕಚೇರಿ, ನಗರಸಭೆ ಹಾಗೂ ಶಿಕ್ಷಕರ ದಿನಾಚರಣೆ ಅನುಷ್ಠಾನ ಸಮಿತಿಯಿಂದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಮೂಲ ಸೌಲಭ್ಯ ಒದಗಿಸುತ್ತ ಬಂದಿದೆ. ಇದರ ಜತೆಗೆ ಶಿಕ್ಷಕರಿಗೂ ಅಗತ್ಯ ಸೌಲಭ್ಯ ನೀಡಬೇಕಿದೆ. ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ಅತಿಥಿ, ಗುತ್ತಿಗೆ ಶಿಕ್ಷಕರ ಬಗ್ಗೆ ಗಮನ ಹರಿಸಬೇಕು. ಸಮಾಜದ ಸ್ವಾಸ್ಥೃ ಕಾಪಾಡುವಲ್ಲಿ ಶಿಕ್ಷಕರ ಕಾಯಕ ದೊಡ್ಡದು. ಇತ್ತೀಚೆಗೆ ಹೊನ್ನೆಸರದ ಜಯಂತಿ ಎಂಬ ಶಿಕ್ಷಕಿಯೊಬ್ಬರು ಶಾಲೆ ಬಿಟ್ಟ ಇಬ್ಬರು ಮಕ್ಕಳ ಮನವೊಲಿಸಲು 80 ಕಿ.ಮೀ. ಹೋಗಿ ಶಾಲೆಗೆ ಮರಳಿ ಕರೆತಂದದ್ದು ಶಿಕ್ಷಕ ಸಮೂಹ ಗೌರವ ಪಡುವಂತಹ ವಿಷಯ ಎಂದರು.

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶ್ ಮಾತನಾಡಿ, ಪ್ರತಿವರ್ಷ ಶಿಕ್ಷಕರ ದಿನಾಚರಣೆ ಸಂದರ್ಭ ನಮ್ಮ ಬೇಡಿಕೆ ಈಡೇರಿಸುವ ಭರವಸೆ ಸಿಗುತ್ತದೆ. ಆದರೆ ಶಿಕ್ಷಕರ ಸಮಸ್ಯೆಗೆ ಅಂತಿಮ ಪರಿಹಾರ ಈತನಕ ಸಿಕ್ಕಿಲ್ಲ. ಶಿಕ್ಷಕರಿಗೆ ಪಾಠ ಮಾಡುವ ಕೆಲಸಕ್ಕಿಂತ ಇತರ ಕೆಲಸಗಳ ಹೊರೆಯೇ ಹೆಚ್ಚು. ಇದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಿವೃತ್ತ ಶಿಕ್ಷಕರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶಿಕ್ಷಕರು, ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶ ಪಡೆದ ಶಾಲೆಗಳನ್ನು, ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ಬಿಇಒ ಪರಶುರಾಮಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎನ್.ಸಂತೋಷಕುಮಾರ್, ಎ.ಎಚ್.ಭೂಮೇಶ್, ರಮೇಶ್, ಲಕ್ಷ್ಮಣ್ ನಾಯ್ಕ್, ಓಂಕಾರಪ್ಪ, ಮಹಾಬಲೇಶ್ವರ, ಪ್ರಭು, ಸುಬ್ರಹ್ಮಣ್ಯ, ವಿಕ್ಟೋರಿಯಾ ಫಟಾರ್ಡೋ, ಕವಿರಾಜ್, ಚಂದ್ರಪ್ಪ, ಎಸ್.ಆರ್.ಮಂಜಪ್ಪ, ಪಾರ್ವತಿ, ಬಸವರಾಜ್, ಅನ್ನಪೂರ್ಣಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net