

ತೀರ್ಥಹಳ್ಳಿ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕ ಸಮುದಾಯ ಸಂತೋಷ, ಸಮೃದ್ಧಿಯಿಂದ ಇದ್ದಾಗ ಸಮಾಜದಲ್ಲಿ ಶಾಂತಿಯುತ ವಾತಾವರಣ ನೆಲೆಸುತ್ತದೆ ಎಂದು ಮಳಲಿಮಠದ ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಕುವೆಂಪು ಬಡಾವಣೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸೌಹಾರ್ದ ಸಹಕಾರ ಸಂಘದಿಂದ ನಿರ್ಮಿಸಿರುವ 16 ಕೋಟಿ ರೂ. ವೆಚ್ಚದ ಶಿಕ್ಷಕರ ಸೌಹಾರ್ದ ಭವನ ಉದ್ಘಾಟನೆ, ಸಂಘದ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು.
ಅರಿವು ಮೂಡಿಸುವ ಶಿಕ್ಷಕರು ಬದುಕಿನ ಆಧಾರಸ್ತಂಭ. ಶಿಕ್ಷಕ ಸ್ಥಾನ ಉನ್ನತವಾದುದು. ಅಮೂಲ್ಯ ಸಮಯ ಪಾಲನೆಯೊಂದಿಗೆ ಶಿಕ್ಷಕರಾದವರು ಜ್ಞಾನಭಂಡಾರ ಹೊಂದುವ ಪ್ರಯತ್ನ ಮಾಡಬೇಕು. ಸಾಧನೆಯ ಹಾದಿಯಲ್ಲಿ ಮುನ್ನಡೆಯುವವರು ಕಾಲು ಎಳೆಯುವವರ ಬಗ್ಗೆ ಚಿಂತೆ ಮಾಡಬಾರದು ಎಂದು ತಿಳಿಸಿದರು.
ಹೊಸ ಕಲ್ಪನೆಯೊಂದಿಗೆ ಸಹಕಾರ ಕ್ಷೇತ್ರದಲ್ಲಿ ಅನುಕರಣೀಯ ಸಾಧನೆಯ ಮೂಲಕ ಶಿಕ್ಷಕ ಸಮುದಾಯದಲ್ಲಿ ಹೊಸ ಭಾಷ್ಯ ಬರೆದಿರುವ ಮಹಾಬಲೇಶ್ವರ ಹೆಗಡೆ ನೇತೃತ್ವದ ತಂಡದ ಸಾಧನೆ ಶಿಕ್ಷಕ ಸಮುದಾಯದ ಘನತೆಯನ್ನು ಎತ್ತರಕ್ಕೇರಿಸಿದೆ. ಶಿಕ್ಷಕರಿಗೆ ಕೈಗೆಟಕುವ ದರದಲ್ಲಿ ನಿವೇಶನ, ಸಂಕಷ್ಟಕ್ಕೆ ಆರ್ಥಿಕ ನೆರವನ್ನು ಕಡಿಮೆ ಅವಧಿಯಲ್ಲಿ ನೀಡುತ್ತಿರುವುದು ಪ್ರಶಂಸನೀಯ.ಆರಗ ಜ್ಞಾನೇಂದ್ರಶಾಸಕ
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, 16 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸಭಾಂಗಣ, ವಸತಿ ಮತ್ತು ವಾಣಿಜ್ಯ ಸಂಕೀರ್ಣವು ಕುವೆಂಪು ಬಡಾವಣೆಗೆ ಮುಕುಟಪ್ರಾಯದಂತಿದೆ. ಜನರ ಬೇಡಿಕೆಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕಿದ್ದ ರಾಷ್ಟ್ರೀಕೃತ ಬ್ಯಾಂಕ್‌ಗಳು ಉಪಯುಕ್ತವಾಗಿಲ್ಲದ ಕಾರಣ ಜನರು ಸಹಕಾರ ಸಂಸ್ಥೆಗಳತ್ತ ಮುಖ ಮಾಡಿದ್ದಾರೆ ಎಂದರು.
ಹದಿನಾರು ವರ್ಷಗಳ ಹಿಂದೆ ಸ್ಥಾಪಿಸಿರುವ ಸಂಸ್ಥೆಯ ಮುಖ್ಯ ಕಚೇರಿ ತೀರ್ಥಹಳ್ಳಿಯಲ್ಲಿದೆ. ರಾಜ್ಯವ್ಯಾಪಿ 9 ಶಾಖೆಗಳನ್ನು ಹೊಂದಿದೆ. 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಆರಂಭಿಸಿದ್ದ ಕಟ್ಟಡ, ಕರೊನಾ ಅವಧಿಯಲ್ಲಿ ವಿಳಂಬದಿಂದ ಹೆಚ್ಚುವರಿ ನಾಲ್ಕು ಕೋಟಿ ರೂ. ವೆಚ್ಚವಾಯಿತು.ಮಹಾಬಲೇಶ್ವರ ಹೆಗಡೆರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ
ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸಮಾಜದಲ್ಲಿ ವಿಶೇಷ ಸ್ಥಾನ ಹೊಂದಿರುವ ಶಿಕ್ಷಕರಿಂದ ಸ್ಥಾಪನೆಗೊಂಡಿರುವ ಸಂಸ್ಥೆಯ ಕಾರ್ಯ ಅಭಿನಂದನೀಯ ಎಂದರು. ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಕರ್ನಾಟಕ ಸೌಹಾರ್ದ ಫೆಡರೇಶನ್ ಉಪಾಧ್ಯಕ್ಷ ಎ.ಆರ್.ಪ್ರಸನ್ನಕುಮಾರ್, ಸಂಘದ ಉಪಾಧ್ಯಕ್ಷ ಎಂ.ಎಸ್.ತಿಮ್ಮಪ್ಪ, ಪಪಂ ಸದಸ್ಯರಾದ ಸುಶೀಲಾ ಶೆಟ್ಟಿ ಹಾಗೂ ರತ್ನಾಕರ ಶೆಟ್ಟಿ, ಸಿರಿಬೈಲ್ ಧರ್ಮೆಶ್, ರಂಗಪ್ಪಗೌಡ ಉಪಸ್ಥಿತರಿದ್ದರು.