

ರಾಣೆಬೆನ್ನೂರ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ತೊಡಕಾಗಿರುವ ತಾಂತ್ರಿಕ ಹಾಗೂ ಸರ್ವರ್ ಸಮಸ್ಯೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ತಾಲೂಕ ಸರ್ಕಾರಿ ನೌಕರರ ಸಂಘಗಳ ವತಿಯಿಂದ ಗುರುವಾರ ತಹಸೀಲ್ದಾರ್ ಆರ್.ಎಚ್. ಭಾಗವಾನ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಮೀಕ್ಷೆ ಮಾಡುವಾಗ ಸರ್ವರ್ ಲಭಿಸಿದ ಕಾರಣ ಗಣತಿ ಮಾಡುವ ನೌಕರರು ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಪ್ರಮುಖವಾಗಿ ಲಾಗಿನ್ ಸಮಸ್ಯೆ, ವೆಬ್ ಲಿಸ್ಟನಲ್ಲಿ ಸೇರದವರು, ಅಸಮರ್ಪಕ ಲೊಕೇಶನ್, ಬಾರದ ಓಟಿಪಿ, ಪೃಥ ಆ್ಯಪ್ ನ್ಯಾವಿಗೇಶನ್ ಸರಿಯಾಗಿ ಕಾರ್ಯನಿರ್ವಹಿಸದಿರುವುದು, ಮನೆ ಪಟ್ಟಿ ನೀಡದಿರುವುದು ನೌಕರರಿಗೆ ಸಮೀಕ್ಷೆ ನಡೆಸಲು ತೊಂದರೆ ಉಂಟು ಮಾಡುತ್ತಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ಸುಗಮವಾಗಿ ಸಮೀಕ್ಷೆ ಕಾರ್ಯ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಕೆ.ವಿ. ಕಾಟಣ್ಣನವರ, ಎಚ್.ಎಂ. ಸುತಾರ, ಮಂಜುನಾಥ ಕೆಂಚರೆಡ್ಡಿ, ಎಸ್.ಜಿ. ಮಾಕಾಳ, ಎಸ್.ವಿ. ದೊಡ್ಮನಿ, ವಿ.ಎಚ್. ಕೆಂಚರೆಡ್ಡಿ, ಸಲ್ಮಾಬಾನು, ಎಸ್.ಬಿ. ಪುಟ್ಟನಗೌಡ, ಎಂ.ಎಸ್. ದೊಡ್ಡನಾಗಳ್ಳಿ ಮತ್ತಿತರರು ಉಪಸ್ಥಿತರಿದ್ದರು.