

ರಾಣೆಬೆನ್ನೂರ: ಶಿಕ್ಷಕರು ಏಣಿ ಇದ್ದಂತೆ ಸಮಾಜದಲ್ಲಿ ವಿದ್ಯಾಥಿರ್ಗಳನ್ನು ಉನ್ನತ ಮಟ್ಟ ಎಂಬ ಏಣಿಯ ಮೇಲೆ ಹತ್ತಿಸುವ ಕಾರ್ಯ ಮಾಡುತ್ತಾರೆ. ಶಿಕ್ಷಣ ನೀಡುವುದು ಜಗತ್ತಿನಲ್ಲಿ ಅತಿ ಶ್ರೇಷ್ಠವಾದ ವೃತ್ತಿಯಾಗಿದೆ ಎಂದು ಚಿತ್ರ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಪಂಚಾಯಿತಿ, ತಾಲೂಕು ಆಡಳಿತದ ವತಿಯಿಂದ ನಗರದ ಎಪಿಎಂಸಿ ಆವರಣದ ರೈತ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ಮೊಬೈಲ್ ನೋಡಬೇಡಿ ಎಂದು ಮಕ್ಕಳಿಗೆ ಹೇಳುತ್ತಿದ್ದೇವು. ಆದರೀಗ ಮೊಬೈಲ್ನಲ್ಲಿಯೆ ಕಲಿಸುವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಶಿಕ್ಷಕರು ಸಹ ಮೊಬೈಲ್ ಶಿಕ್ಷಣಕ್ಕೆ ಹೊಂದಿಕೊಳ್ಳಬೇಕು. ಎಲ್ಲ ವಿಷಯದಲ್ಲಿ ಪರಿಣಿತಿ ಹೊಂದಬೇಕು. ಆಗ ಮಾತ್ರ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾಥಿರ್ಗಳ ಜತೆ ನೇರವಾಗಿ ಬೆರೆಯಲು ಸಾಧ್ಯವಾಗುತ್ತದೆ ಎಂದರು.
ತಾಪಂ ಇಒ ಪರಮೇಶ, ನಗರಸಭೆ ಆಯುಕ್ತ ಕ್ಕೀರಪ್ಪ ಇಂಗಳಗಿ, ಡಿಡಿಪಿಐ ಸುರೇಶ ಹುಗ್ಗಿ, ಡಯಟ್ ಪ್ರಾಚಾರ್ಯ ಗಿರೀಶ ಪದಕಿ, ಬಿಇಒ ಶ್ಯಾಮಸುಂದರ ಅಡಿಗ, ಪ್ರಮುಖರಾದ ಕೆ.ಎಚ್. ಮುಕ್ಕಣ್ಣನವರ, ಎಂ.ಡಿ. ದ್ಯಾಮಣ್ಣನವರ, ಎನ್.ಎಂ. ಚವಡಣ್ಣನವರ, ಎಚ್.ಪಿ. ಬಣಕಾರ, ರಮೇಶ ಅಳಲಗೇರಿ, ಡಾ. ಮಾಲತೇಶ ಚಲವಾದಿ, ನಾಗರಾಜ ನಲವಾಗಲ ಮತ್ತಿತರರು ಉಪಸ್ಥಿತರಿದ್ದರು.