

ಕೋಲ್ಕತಾ: ಗುರುವಿಗೆ ಅತ್ಯಂತ ದೊಡ್ಡ ಗೌರವವಿದೆ. ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರರಿಗೂ ಹೋಲಿಸುತ್ತೇವೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪುಗೊಳಿಸುವಲ್ಲಿ ಇವರ ಪಾತ್ರ ಬಹುಮುಖ್ಯವಾದದ್ದು. ಈ ಕಾರ್ಯವನ್ನು ಬಹುತೇಕ ಶಿಕ್ಷಕರು ಪಾಲಿಸುತ್ತಿದ್ದಾರೆ ಕೂಡ.
ಆದರೆ ಇದೀಗ ಲಾಕ್‌ಡೌನ್‌ನಿಂದಾಗಿ ಶಿಕ್ಷಕರು ನೇರವಾಗಿ ಮಕ್ಕಳಿಗೆ ಪಾಠ ಮಾಡುವುದು ಕಷ್ಟವಾಗಿದೆ. ಆದ್ದರಿಂದ ಎಷ್ಟೋ ಕಡೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಪಾಠ ಮಾಡಲು ಆನ್‌ಲೈನ್ ಮೊರೆ ಹೋಗಿದ್ದಾರೆ. ಈಗ ಹಳ್ಳಿಹಳ್ಳಿಗಳಲ್ಲಿಯೂ ಇಂಟರ್‌ನೆಟ್ ಬಂದಿದೆ ಎಂದು ಜಾಹೀರಾತುಗಳಲ್ಲಿ ಪ್ರಸಾರವಾಗುತ್ತಿದ್ದರೂ, ಎಷ್ಟೋ ಗ್ರಾಮಗಳಲ್ಲಿ ಯಾವ ನೆಟ್‌ವರ್ಕ್‌ಗಳೂ ಸಿಗುತ್ತಿಲ್ಲ. ಕೆಲವೆಡೆ ಸಿಕ್ಕರೂ ಆಗೊಮ್ಮೆ ಈಗೊಮ್ಮೆ ಇಂಟರ್‌ನೆಟ್ ಕನೆಕ್ಟ್ ಆಗುತ್ತಿದ್ದಂತೆಯೇ ಮಾಯವಾಗಿಬಿಡುತ್ತದೆ.
ಕೋಲ್ಕತಾದ ಎರಡು ಪಾಠಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇತಿಹಾಸ ಶಿಕ್ಷಕ ಸುಬ್ರತ್ ಪಾಟಿ ಅವರದ್ದು ಇದೇ ಗೋಳು. ಕೋಲ್ಕತಾದಿಂದ ಸುಮಾರು 200 ಕಿ.ಮೀನಷ್ಟು ದೂರ ಇರುವ ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ಈ ಶಿಕ್ಷಕ ನೆಲೆಸಿದ್ದಾರೆ.
ಶಾಲೆಗೆ ರಜೆ ಇರುವ ಕಾರಣ, ತಮ್ಮ ಹಳ್ಳಿಗೆ ವಾಪಸಾಗಿದ್ದರು. ಆದರೆ ಇದೀಗ ಲಾಕ್‌ಡೌನ್‌ನಿಂದಾಗಿ ತಮ್ಮ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದ ಪಾಠ ಮಾಡಲು ಇವರು ಆನ್‌ಲೈನ್ ಮೊರೆ ಹೋಗುವುದು ಅನಿವಾರ್ಯವಾಗಿದೆ. ಆದರೆ ನೆಟ್‌ವರ್ಕ್? ಹೀಗೆ ಬಂದು ಹಾಗೆಯೇ ಮಿಂಚಿ ಮರೆಯಾಗುವ ನೆಟ್‌ವರ್ಕ್‌ನಿಂದ ಇವರಿಗೆ ಪಟ್ಟಣದಲ್ಲಿರುವ ವಿದ್ಯಾರ್ಥಿಗಳ ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ. ಆದರೆ ಇವರು ತಮ್ಮ ಹಠ ಬಿಡಲಿಲ್ಲ.
ಏನು ಮಾಡುವುದು ಎಂದು ಯೋಚಿಸುತ್ತಿರುವಾಗಲೇ ಎತ್ತರದ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಿಗುವ ಬಗ್ಗೆ ಅವರ ತಲೆಗೆ ಹೊಳೆಯಿತು. ಆದರೆ ಅವರ ಊರಿನಲ್ಲಿ ದಿನವೂ ಎತ್ತರದ ಪ್ರದೇಶ ಹುಡುಕಿ ಹೋಗುವುದು ಹೇಗೆ? ಆ ಚಿಂತೆ ಮಾಡುತ್ತಲೇ ಅವರಿಗೆ ಕಂಡದ್ದು ಮನೆಯ ಬಳಿ ಇರುವ ಕಹಿಬೇವಿನ ಮರ!
ಇನ್ನೇಕೆ ತಡ, ಎತ್ತರದ ಪ್ರದೇಶ ಮನೆಯ ಬಳಿಯೇ ಸಿಕ್ಕಿದೆ. ಇನ್ನು ತಡ ಮಾಡಬಾರದು ಎಂದುಕೊಂಡ ಸುಬ್ರತ್ ಅವರು, ಸರಸರನೆ ಮರವೇರಿ ನೋಡಿದರು! ಆಹಾ! ಸಿಗ್ನಲ್ ಚೆನ್ನಾಗಿ ಸಿಕ್ಕಿತು. ಈ ಶಿಕ್ಷಕನ ಖುಷಿಗೆ ಪಾರವೇ ಇರಲಿಲ್ಲ. ತಡ ಮಾಡದೇ ವಾಪಸ್ ಮನೆಗೆ ಹೋಗಿ ಒಂದು ಕಟ್ಟಿಗೆಯ ಹಲಗೆ ತಂದು ಪುನಃ ಮರವೇರಿ ಬೇವಿನ ಮರದ ರೆಂಬೆ ಕೊಂಬೆಗಳ ಸಹಾಯದಿಂದ ಅಲ್ಲಿಯೇ ಕುಳಿತುಕೊಳ್ಳುವ ವ್ಯವಸ್ಥೆಯನ್ನೂ ಮಾಡಿಬಿಟ್ಟರು! ಬಿದಿರು ಹಾಗೂ ಇನ್ನಿತರ ವಸ್ತುಗಳ ಸಹಾಯದಿಂದ ಮರದ ಮೇಲೆಯೇ ಆರಾಮಾಗಿ ಕುಳಿತುಕೊಳ್ಳುವ ಜಾಗವನ್ನು ನಿರ್ಮಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ. ಪದೇ ಪದೇ ಕೆಳಗೆ ಇಳಿದು ಬರುವ ಗೋಜು ಬೇಡವೆಂದು ಅಲ್ಲಿಯೇ ಅಗತ್ಯ ಇರುವಷ್ಟು ಆಹಾರ, ನೀರುಗಳನ್ನೂ ತೆಗೆದುಕೊಂಡು ಹೋಗುತ್ತಿದ್ದಾರೆ. ಹೀಗೆ ದಿನವೂ ಅಲ್ಲಿಂದಲೇ ಅವರ ಆನ್‌ಲೈನ್ ಪಾಠ ನಡೆಯುತ್ತಿದೆ.
ತೀರಾ ಬಿಸಿಲು ಇದ್ದಾಗ ಅದರ ತಾಪ ತಡೆದುಕೊಳ್ಳುವುದು ಕಷ್ಟವಾದರೂ ವಿದ್ಯಾರ್ಥಿಗಳಿಗಾಗಿ ಅದನ್ನು ಸಹಿಸಿಕೊಳ್ಳುತ್ತೇನೆ ಎನ್ನುತ್ತಿದ್ದಾರೆ ಈ ಆದರ್ಶ ಶಿಕ್ಷಕ. ಈ ರೀತಿ ಮನೆ ನಿರ್ಮಿಸುವ ಯೋಚನೆ ಹೇಗೆ ಬಂತು ಎಂದು ಅವರನ್ನು ಕೇಳಿದರೆ, ಸಾಮಾನ್ಯವಾಗಿ ತೋಟದಲ್ಲಿ ಆನೆಗಳು ದಾಳಿ ನಡೆಸುತ್ತವೆ. ಅವುಗಳ ಮೇಲೆ ಕಣ್ಣಿಡಲು ಇದೇ ರೀತಿಯ ತಾತ್ಕಲಿಕ ಮನೆಯನ್ನು ಮರಗಳ ಮೇಲೆ ನಿರ್ಮಿಸುತ್ತೇವೆ. ಬೇವಿನ ಮರವಾದ್ದರಿಂದ ಸ್ವಲ್ಪ ಕಷ್ಟವಾಯಿತು. ಆದರೂ ಸ್ನೇಹಿತರ ನೆರವಿನಿಂದ ಇದನ್ನು ನಿರ್ಮಿಸಿಕೊಂಡೆ ಎನ್ನುತ್ತಾರೆ.
ವಿದ್ಯಾರ್ಥಿಗಳ ಮೇಲಿನ ಇವರ ಈ ಪರಿಯ ಶ್ರದ್ಧೆ, ಪ್ರೀತಿಯನ್ನು ಕಂಡು ಸ್ಥಳೀಯ ಮಾಧ್ಯಮಗಳು ಮೊದಲು ವರದಿ ಮಾಡಿದವು. ನಂತರ ಇದು ಎಲ್ಲೆಡೆಯೂ ಪ್ರಸಾರವಾಗಿ ಈ ಶಿಕ್ಷಕನಿಗೆ ಭಾರಿ ಮೆಚ್ಚುಗೆಗಳು ಬರುತ್ತಿವೆ. (ಏಜೆನ್ಸೀಸ್)