ಮಕ್ಕಳಲ್ಲಿ ನೈತಿಕ ಶಿಕ್ಷಣ, ಮಾನವೀಯ ಮೌಲ್ಯಗಳನ್ನು ಕಲಿಸಿ

05 TKE 1
ತರೀಕೆರೆಯಲ್ಲಿ ಆಯೋಜಿಸಿದ್ದ ತಾಲೂಕುಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಅವಧೂತ ಶ್ರೀ ವಿನಯ್ ಗುರೂಜಿ ಉದ್ಘಾಟಿಸಿದರು. ಜಿ.ಎಚ್.ಶ್ರೀನಿವಾಸ್, ಎಚ್.ಪ್ರಶಾಂತ್, ಟಿ.ಗೋವಿಂದಪ್ಪ, ಸಿ.ವಿ.ರವಿ, ಎಚ್.ನಾಗರಾಜಪ್ಪ ಇತರರಿದ್ದರು.
Published on

ತರೀಕೆರೆ: ಭಾರತೀಯ ಗುರು ಪರಂಪರೆ ಅತ್ಯಂತ ಶ್ರೇಷ್ಟವಾಗಿದೆ ಎಂದು ಗೌರಿಗದ್ದೆಯ ಅವಧೂತ ಶ್ರೀವಿನಯ್ ಗುರೂಜಿ ಹೇಳಿದರು.
ಮಂಗಳವಾರ ಪಟ್ಟಣದ ಖಾಸಗಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸರ್ವ ಶ್ರೇಷ್ಠವಾದ ಭಾರತೀಯ ಗುರುಪರಂಪರೆ ನಿರಂತರವಾಗಿದ್ದು, ಮುಂದಿನ ಪೀಳಿಗೆ ಇದನ್ನು ಮುಂದುವರಿಸಬೇಕು.ಪ್ರಸ್ತುತ ಸನ್ನಿವೇಶದಲ್ಲಿ ಮನುಷ್ಯನಿಗೆ ಮಾನವೀಯ ಮೌಲ್ಯಗಳು ಅವಶ್ಯವಾಗಿವೆ. ಉತ್ತಮ ಮಾನವೀಯ ಮೌಲ್ಯಸೃಷ್ಟಿಸಿ ಸಧೃಡ ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾಗಿದೆ. ಸನ್ಯಾಸಿಗಳು ಮಠ, ಮಾನ್ಯ ಕಟ್ಟುವುದಕ್ಕಿಂತ ಒಡೆದ ಮನಸ್ಸುಗಳನ್ನು ಕಟ್ಟಬೇಕು. ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಂಡು ನೈತಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಶಿಕ್ಷಕರು ಮಕ್ಕಳ ಪ್ರೀತಿಗಳಿಸುವ ಜತೆಗೆ ಅವರ ಬೌಧಿಕ ಸಾಮರ್ಥ್ಯ ಗಮನಿಸಿ ಅದಕ್ಕೆ ತಕ್ಕಂತೆ ಭೋದಿಸಬೇಕು. ಈ ಮೂಲಕ ಮನ ಪರಿವರ್ತನೆಗೊಳಿಸಿ ಸರ್ಕಾರಿ ಸೌಲಭ್ಯಗಳನ್ನು ಮಕ್ಕಳಿಗೆ ಮುಟ್ಟಿಸಬೇಕು. ತಾಲೂಕಿನಲ್ಲಿ ಗುರುಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸುವ ಜತೆಗೆ ಸೂಕ್ತ ಜಾಗದಲ್ಲಿ ತಾಲೂಕು ಕ್ರೀಡಾಂಂಗಣ ನಿರ್ಮಿಸಲು ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಬಿಇಒ ಟಿ.ಗೋವಿಂದಪ್ಪ ಮಾತನಾಡಿ, ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಜತೆಗೆ ವೈಜ್ಞಾನಿಕ ಮನೋಭಾವ ಬೆಳೆಸುವುದು ಅಗತ್ಯ. ಶಿಕ್ಷಕರು ಸಮಯ ಪಾಲನೆಗೆ ಹೆಚ್ಚು ಆದ್ಯತೆ ನೀಡಿ ಎಲ್ಲರಿಗೂ ಆದರ್ಶವಾಗಬೇಕು ಎಂದರು.
ನಿವೃತ್ತ ಶಿಕ್ಷಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ನೀಡಲಾಯಿತು. ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್, ಪುರಸಭೆ ಮಾಜಿ ಅಧ್ಯಕ್ಷ ಎಂ.ನರೇಂದ್ರ, ಟಿ.ಎಸ್.ಪ್ರಕಾಶ್, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಟಿ.ಎಸ್.ಗಣೇಶ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ವಿ.ರವಿ, ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಎಚ್.ನಾಗರಾಜಪ್ಪ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಆನಂದ್, ಎ.ಪಿ.ಗುರುಮೂರ್ತಿ, ಎಂ.ರುದ್ರಪ್ಪ, ರಾಜಶೇಖರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net