

ಎನ್.ಆರ್.ಪುರ: ಸಂಸ್ಕೃತ ಭಾಷೆ ನಮ್ಮ ಸಂಸ್ಕೃತಿ ಜೀವಾಳ ಎಂದು ಹರಿಹರಪುರದ ನಿವೃತ್ತ ಶಿಕ್ಷಕ ಸಂಸ್ಕೃತ ಭಾಷೆ ತರಬೇತುದಾರ ಅನಂತ ಹೆಬ್ಬಾರ ಹೇಳಿದರು.
ಗುರುವಾರ ಪಟ್ಟಣದ ಶ್ರೀ ಉಮಾಮಹೇಶ್ವರ ಸ್ವಾಮಿ ಸಭಾ ಭವನದಲ್ಲಿ ತಾಲೂಕು ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ನಡೆಯುತ್ತಿದ್ದ ಸಂಸ್ಕೃತ ಸಂಭಾಷಣೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸಂಸ್ಕೃತ ಭಾಷೆಗೆ ಅಂತ್ಯವಿಲ್ಲ. ಇಂಗ್ಲಿಷ್ ಭಾಷೆಗಿಂತಲೂ ಅನಾದಿ ಕಾಲದಿಂದಲೂ ಸಂಸ್ಕೃತವಿದೆ. ಎಲ್ಲ ಭಾಷೆಗಳಲ್ಲಿನ ಸಂಸ್ಕೃತ ಪದಗಳನ್ನು ತೆಗೆದು ಹಾಕಿದರೆ ಆ ಭಾಷೆ ಪರಿಪೂರ್ಣವಾಗುವುದಿಲ್ಲ. ಆದ್ದರಿಂದ ಎಲ್ಲರೂ ಸಂಸ್ಕೃತ ಕಲಿಯಬೇಕು. ಮಕ್ಕಳಿಗೆ ಸಂಸ್ಕೃತ ಭಾಷೆಯೊಂದಿಗೆ, ಸಂಸ್ಕೃತಿಯನ್ನೂ ಕಲಿಸಬೇಕು ಎಂದರು.
ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೊನೋಡಿ ಗಣೇಶ್ ಮಾತನಾಡಿ, ಸಂಸ್ಕೃತ ದೇವ ಭಾಷೆಯಾಗಿದೆ. ನಮ್ಮ ತಾಯಿ ಸಂಸ್ಕೃತ. ಸಂಸ್ಕೃತ ಭಾಷೆಯನ್ನು ಅನೇಕ ವೈರಿಗಳು ನಾಶ ಮಾಡಲು ಹೊರಟಿದ್ದರು. ಸಂಸ್ಕೃತ ಅನೇಕ ಗ್ರಂಥಗಳನ್ನು ನಾಶ ಪಡಿಸಿದರೂ ಸಂಸ್ಕೃತ ಭಾಷೆಯನ್ನು ಮಾತ್ರ ಮಾಡಲು ಸಾಧ್ಯವಾಗಿಲ್ಲ. ಆಂಗ್ಲ ಭಾಷೆಯ ವ್ಯಾಮೋಹದಿಂದಾಗಿ ಸಂಸ್ಕೃತ ಭಾಷೆ ವಿನಾಶದ ಅಂಚಿನಲ್ಲಿದೆ. ನಾವು ಮಾತನಾಡುವ ಕೆಲವು ಪದಗಳಿಗೆ ಆಂಗ್ಲ ಭಾಷೆಯಲ್ಲಿ ಪದಗಳೇ ಇಲ್ಲ ಎಂದರು.
ಕೊಪ್ಪ ತಾಲೂಕು ಸಂಸ್ಕೃತ ಭಾರತಿ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಸಂಸ್ಕೃತ ಭಾಷೆ ಉಳಿಸಲು ಇರುವ ಪ್ರೇರಕ ಹಾಗೂ ಪೂರಕ ಶಕ್ತಿ ಎಂದರೆ ಅದು ಸಂಸ್ಕೃತ ಭಾರತಿ. ಎಲ್ಲ ವಯೋಮಾನದವರಿಗೂ ಸಂಸ್ಕೃತ ಕಲಿಕೆಗೆ ಸಂಸ್ಕೃತ ಪಠಣ ಕೇಂದ್ರಗಳನ್ನು ಕೊಪ್ಪದಲ್ಲಿ ಸ್ಥಾಪಿಸಲಾಗಿತ್ತು. ಕರೊನಾ ನಂತರ ಅದನ್ನು ಪುನರ್ ಸ್ಥಾಪಿಸಲು ಸಾಧ್ಯವಾಗಿರಲಿಲ್ಲ. ನಮ್ಮ ಮಕ್ಕಳಿಗೆ ಸಂಸ್ಕೃತ ಭಾಷೆಯೊಂದಿಗೆ ಸಂಸ್ಕೃತಿಯನ್ನು ಕಲಿಸಬೇಕು. ಸಂಸ್ಕೃತ ಮತ್ತು ಸಂಸ್ಕೃತಿ ಒಂದಕ್ಕೊಂದು ಪೂರಕವಾಗಿದೆ. ಒಂದನ್ನು ಬಿಟ್ಟು ಇನ್ನೊಂದು ಇರುವುದಿಲ್ಲ. ವಾರದಲ್ಲಿ ಒಂದು ದಿನ, ಒಂದು ಗಂಟೆ ಸಂಸ್ಕೃತ ಸಂಭಾಷಣೆ ಶಿಬಿರಕ್ಕೆ ಸಮಯ ಮೀಸಲಿಡ ಬೇಕು ಎಂದರು.