ರೈಲ್ವೇ ಇಲಾಖೆಯಲ್ಲಿ ಟಿಸಿ ನೌಕರಿ ಆಮಿಷವೊಡ್ಡಿ ವಂಚನೆ

jobs
Published on

ಬೆಂಗಳೂರು: ಕೇಂದ್ರ ರೈಲ್ವೇ ಇಲಾಖೆಯಲ್ಲಿ ಟಿಕೆಟ್ ಕಲೆಕ್ಟರ್ (ಟಿಸಿ) ನೌಕರಿ ಕೊಡಿಸುವುದಾಗಿ ಐವರಿಗೆ ತಲಾ 20 ಲಕ್ಷ ರೂ. ಪಡೆದು ನಕಲಿ ನೇಮಕಾತಿ ಪತ್ರ, ತರಬೇತಿ ಕೊಡಿಸಿ ವಂಚಿಸಿರುವುದು ಬೆಳಕಿಗೆ ಬಂದಿದೆ.

ವಿಜಯಪುರ ಜಿಲ್ಲೆ ಆಲಮೇಲ ನಿವಾಸಿ ಹುಸನಪ್ಪ ಮಾಡ್ಯಾಳ, ಈ ಕುರಿತು ಸಿಸಿಬಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಡಾ. ಲಕ್ಷ್ಮೀಕಾಂತ ಹೊಸಮುನಿ, ಭಿಮರಾವ ಎಂಟಮಾನ್, ವಿ. ಮುರಳಿ, ಬಸುಕಾಸಪ್ಪ ಮಯೂರ, ಕೂಲಪ್ಪ ಸಿಂಗ, ಶ್ರೀಧರ ಮತ್ತು ಸಂತೋಷ್ ನಾಯಕ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2022ರಲ್ಲಿ ರೈಲ್ವೇ ಇಲಾಖೆಯಲ್ಲಿ ಟಿಸಿ ನೌಕರಿ ಕೊಡಿಸುವುದಾಗಿ ಆರೋಪಿಗಳು ನಂಬಿಸಿ ಅಶೋಕ ಲಕ್ಕಪ್ಪ ವಾಲಿಕಾರ, ಗಣಪತಿ ಬಂಡಿಬಾ ವಾಗಮೊರೆ, ಸುನೀಲ್ ರಾಯಗೊಂಡ ಪೂಜಾರಿ ಮತ್ತು ಶಿವಕುಮಾರ್ ಯಮನಪ್ಪ ಹೊಸಮನಿ ಎಂಬುವರ ಬಳಿ ತಲಾ 20 ಲಕ್ಷ ರೂ. ಅನ್ನು ನಗದು ಮತ್ತು ಬ್ಯಾಂಕ್ ಖಾತೆ ಮೂಲಕ ಪಡೆದುಕೊಂಡರು. ಇದಾದ ಮೇಲೆ ಆನ್‌ಲೈನ್ ಮೂಲಕವೇ ನಕಲಿ ನೇಮಕಾತಿ ಪತ್ರ ಕಳುಹಿಸಿ ಮಹಾರಾಷ್ಟ್ರದ ಮುಂಬೈ ಮತ್ತು ಉತ್ತರ ಪ್ರದೇಶದ ಕಾನ್ಪರದಲ್ಲಿ ಸುಳ್ಳು ತರಬೇತಿ ಕೊಡಿಸಿ ನಂಬಿಕೆ ದ್ರೋಹ ಎಸಗಿದ್ದಾರೆ.

ವಾಪಸ್ ಹಣ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಸುತ್ತಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಸಂತ್ರಸ್ತರು ಕೋರಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net