ತುಂಗಭದ್ರಾ ಜಲಾಶಯಕ್ಕೆ ಪ್ರವಾಸಿಗರ ಲಗ್ಗೆ

news
ತುಂಗಭದ್ರಾ ಜಲಾಶಯಕ್ಕೆ ಭಾನುವಾರ ಹರಿದು ಬಂದ ಪ್ರವಾಸಿಗರ ದಂಡು
Published on

ಹೊಸಪೇಟೆ : ತುಂಗಭದ್ರಾ ಜಲಾಶಯ ಅವದಿಗೂ ಮುನ್ನ ಭರ್ತಿಯಾದ ಹಿನ್ನೆಲೆಯಲ್ಲಿ ಭಾನುವಾರ ಪ್ರವಾಸಿಗರ ದಂಡೇ ಹರಿದುಬಂದಿದ್ದು, ಸೆಲ್ಫಿ ತೆಗೆಯಲು ಮುಗಿಬಿದ್ದಿದ್ದರು.

ತುಂಗಭದ್ರಾ ಜಲಾಶಯದ ಒಳ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಲಾಶಯ ತುಂಬಿದೆ. ಗಾಳಿಯ ರಭಸಕ್ಕೆ ನೆರೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ನೋಡುಗರಿಗೆ ಹಬ್ಬದ ವಾತಾವರಣ ಸೃಷ್ಟಿಸಿದೆ. ಜಲಾಶಯದ ಒಳ ಹರಿವು ಒಂದು ಲಕ್ಷ ಕ್ಯೂಸೆಕ್ ಗೂ ಅಧಿಕ ಇದೆ. ಜಲಾಶಯದ 33 ಕ್ರಸ್ಟ್ ಗೇಟ್ ಮೂಲಕ ಒಂದು ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ನದಿಗೆ ಬಿಡಲಾಗುತ್ತಿದೆ. ಜಲಾಶಯ ನೋಡುಗರ ಕಣ್ಮನ ಸೆಳೆಯುತ್ತಿದ್ದು, ಜಿಲ್ಲೆ ಸೇರಿದಂತೆ ನೆರೆಯ ಕೊಪ್ಪಳ, ಬಳ್ಳಾರಿ, ದಾವಣಗೆರೆ ಸೇರಿದಂತೆ ನಾನಾ ಜಿಲ್ಲೆಗಳ ಜನರು ಕುಟುಂಬ ಸಮೇತರಾಗಿ ಜಲಾಶಯದ ಕ್ರಸ್ಟ್ ಗೇಟ್‌ಗಳಿಂದ ನದಿಗೆ ನೀರು ಹರಿಸುತ್ತಿರುವ ದೃಶ್ಯವನ್ನು ಕಣ್ತುಂಬಿಕೊAಡು ಸಂಭ್ರಮಪಟ್ಟರು. ನಾಲ್ಕನೇ ಶನಿವಾರ ಹಾಗೂ ವಿಕೇಂಡ್ ಹಿನ್ನೆಲೆಯಲ್ಲಿ ಭಾನುವಾರ ಶಾಲೆಗಳ ರಜೆ ಆಗಿರುವುದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಡ್ಯಾಂನಲ್ಲಿರುವ ಬಸ್ ವ್ಯವಸ್ಥೆ ಕೆಲ ತಿಂಗಳಿAದ ಸ್ಥಗಿತಗೊಂಡಿದೆ. ಆದ್ದರಿಂದ ಸಹಸ್ರ ಸಂಖ್ಯೆಯಲ್ಲಿ ಬಂದ ಪ್ರವಾಸಿಗರಿಗೆ ಅನಾನುಕೂಲವಾಯಿತು. ಇದರಿಂದ ಜನರು ಮುಖ್ಯ ಪ್ರವೇಶದ್ವಾರದಿಂದ ನಡೆದುಕೊಂಡೇ ಹೋದರು. ಜಲಾಶಯಕ್ಕೆ ಬೈಕ್, ಕಾರು, ಜೀಪು, ಟಂಟA ವಾಹನಗಳಲ್ಲಿ ಪ್ರವಾಸಿಗರು ಆಗಮಿಸಿದ್ದು, ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೊಲೀಸರು ಹಾಗೂ ಖಾಸಗಿ ಭದ್ರತಾ ಸಿಬ್ಬಂದಿ ಪ್ರಯಾಣಿಕರನ್ನು ನಿಯಂತ್ರಿಸಲು ಹರ ಸಾಹಸಪಡಬೇಕಾಯಿತು. ಜಲಾಶಯದ ದಡದಲ್ಲಿ ಪ್ರವಾಸಿಗರು ಸೆಲ್ಫಿ ಹುಚ್ಚಿನಿಂದಾಗಿ ಅಪಾಯವನ್ನು ಲೆಕ್ಕಿಸದೇ ಫೋಟೊ ಕ್ಲಿಕ್ಕಿಸುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬAದಿತು.

ಜಲಾಶಯದಲ್ಲಿ ನೀರಿನ ಪ್ರಮಾಣ

ತುಂಗಭದ್ರ ಜಲಾಶಯ ಭರ್ತಿ ಹಿನ್ನೆಲೆಯಲ್ಲಿ ನದಿಗೆ ಅಪಾರ ಪ್ರಮಾಣದ ನೀರು ಹರಿಸಲಾಗುತ್ತಿದ್ದು, ಭಾನುವಾರ ಜಲಾಶಯದ 33 ಕ್ರಸ್ಟ್ ಗೇಟ್‌ಗಳ ಮೂಲಕ 1.47 ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ನದಿಗೆ ಹಾಗೂ ಕಾಲೂವೆಗಳಿಗೆ 8 ಸಾವಿರಕ್ಕೂ ಅಧಿಕ ಸೇರಿ, ಒಟ್ಟು 1.56 ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ಹರಿಸಲಾಗುತ್ತಿದೆ. 105.788 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 98.218 ಟಿಎಂಸಿ ನೀರು ಸಂಗ್ರವಾಗಿದೆ. ಇನ್ನೂ ಪ್ರತಿ ಗಂಟೆಗೆ 1.24 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಹರಿದುಬರುತ್ತಿದ್ದು, ಒಳಹರಿವಿನ ಪ್ರಮಾಣ ಅತಿಹೆಚ್ಚಾಗಿದೆ. 1633 ಅಡಿ ಎತ್ತರದ ಜಲಾಶಯಕ್ಕೆ 1631.09 ಅಡಿ ಜಲಾಶಯ ಮಟ್ಟ ದಾಖಲಾಗಿದೆ. ಡ್ಯಾಂನ 33 ಕ್ರಸ್ಟ್ ಗೇಟ್‌ಗಳ ಪೈಕಿ 23 ಗೇಟ್‌ಗಳನ್ನು 4 ಅಡಿ ಮತ್ತು 10 ಗೇಟ್‌ಗಳನ್ನು ಒಂದು ಅಡಿ ಎತ್ತರಿಸಿ ನದಿಗೆ ನೀರು ಹರಿಸಲಾಗುತ್ತಿದೆ. ತುಂಗಭದ್ರಾ ನದಿಯೂ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ತೀರಕ್ಕೆ ತೆರಳದಂತೆ ನದಿ ಪಾತ್ರದಲ್ಲಿರುವ ಗ್ರಾಮಗಳಲ್ಲಿ ಡಂಗೂರ ಬಾರಿಸಿ ಜಾಗೃತಿ ಮೂಡಿಸಲಾಗುತ್ತಿದೆ.

ಮುಂದುವರೆದ ಪ್ರವಾಹ

ತುಂಗಭದ್ರ ಜಲಾಶಯದಿಂದ ಅಪಾರ ನೀರು ನದಿಗೆ ಹರಿಸಿದ ಪರಿಣಾಮ ವಿಶ್ವವಿಖ್ಯಾತ ಹಂಪಿಯ ಪ್ರಮುಖ ಸ್ಮಾರಕಗಳಲ್ಲಿ ನೀರು ಮುಂದುವರಿದಿದೆ. ನದಿ ಪಾತ್ರದಲ್ಲಿರುವ ಹಂಪಿಯ ವಿಜಯನಗರ ಕಾಲದ ಸೇತುವೆ, ಪುರಂದರ ಮಂಟಪ, ರಾಮಲಕ್ಷ್ಮಣ ದೇವಸ್ಥಾನ, ಚಕ್ರತೀರ್ಥ ಸ್ನಾನಘಟ್ಟ ಜಲಾವೃತಗೊಂಡಿವೆ. ಈ ನಡುವೆಯೂ ಹಂಪಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲೂ ಏರಿಕೆ ಕಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net