

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ತುಂಗಭದ್ರಾ ಜಲಾಶಯ ವ್ಯಾಪ್ತಿ ರೈತರು ಸಾಕಷ್ಟು ಖುಷಿಯಲ್ಲಿದ್ದಾರೆ. ಇದಕ್ಕೆ ಕಾರಣ ಯಾವ ಕ್ಷಣದಲ್ಲಾದರೂ ಟಿಟಿ ಡ್ಯಾಂ ಭರ್ತಿಯಾಗಬಹುದು. ಜಲಾಶಯ ತುಂಬಲು ಕೆಲವೇ ಅಡಿಗಳು ಬಾಕಿಯಿದ್ದು, ಕೃಷಿಕರು ಹರ್ಷದಿಂದ ಇದ್ದಾರೆ.
ಮಲೆನಾಡಿನಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ತ್ರಿವಳಿ ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ. 105,788 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 87.056 ಟಿಎಂಸಿ ನೀರು ಸಂಗ್ರಹವಾಗಿದೆ. ಮೂರು ಕ್ಲಸ್ಟ್ ಗೇಟ್‌ನಿಂದ ಸೋಮವಾರ ನದಿಗೆ ನೀರು ಹರಿಬಿಡಲಾಗಿದೆ.
ಸೋಮವಾರ ತುಂಗಭದ್ರಾ ಜಲಾಶಯದಲ್ಲಿ 1627.21 ಅಡಿ ನೀರು ಸಂಗ್ರಹವಾಗಿದ್ದು, ಭರ್ತಿಯಾಗಲು ಕೇವಲ ಐದು ಅಡಿ (ಗರಿಷ್ಠ 1633.00) ಬಾಕಿಯಿದೆ. ಪ್ರಸ್ತುತ ಒಂದು ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. 50 ಕ್ಯೂಸೆಕ್ ವರೆಗೆ ನೀರನ್ನು ಹರಿಬಿಡಲು ನಿರ್ಧರಿಸಲಾಗಿದೆ. ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಕಳೆದ ಮೂರು ದಿನಗಳಲ್ಲಿ 30 ಟಿಎಂಸಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ಕಳೆದ ಕೆಲ ವರ್ಷಗಳಿಂದ ಜೂನ್‌ನಲ್ಲೇ ಜಲಾಶಯ ಭರ್ತಿಯಾಗುತ್ತಿದ್ದು. ಕಳೆದ ಬಾರಿ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಜಲಾಶಯ ತುಂಬದೆ ನೀರು ತಳ ಕಂಡಿತ್ತು. ಪ್ರಸ್ತುತ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಒಳಹರಿವು ಹೆಚ್ಚಾಗಿದೆ. ಕಳೆದ ಆರು ದಿನಗಳಿಂದ ಜಲಾಶಯಕ್ಕೆ ಹರಿದು ಬರುವ ಒಳಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಒಂದು ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ಹರಿದು ಬರುತ್ತಿದೆ. ಕಳೆದ ಮೂರು ದಿನದಲ್ಲಿ ದಿನಕ್ಕೆ 10 ಟಿಎಂಸಿಯಂತೆ ಜಲಾಶಯಕ್ಕೆ ನೀರು ಹರಿದುಬಂದಿದೆ.
ಜು.17ರಂದು 63320 ಒಳಹರಿವು ಬಂದಿದ್ದು, 39.718 ಟಿಎಂಸಿ ನೀರು ಸಂಗ್ರವಾಗಿತ್ತು. ಜು.18ರಂದು 1.04 ಲಕ್ಷ ಕ್ಯೂಸೆಕ್ ಒಳಹರಿವಿಗೆ 46.802 ಟಿಎಂಸಿ ನೀರು ಹರಿದು ಬಂದಿತ್ತು. ಜು.19ರಂದು 55.972 ಟಿಎಂಸಿ ನೀರು, ಜು.20ರಂದು 65.110 ಟಿಎಂಸಿ, ಜು.21ರಂದು 74.582 ಟಿಎಂಸಿ, ಸೋಮವಾರ 87.056 ಟಿಎಂಸಿ ನೀರು ಸಂಗ್ರಹವಾಗಿದೆ. ಒಳಹರಿವು ಲಕ್ಷ ಕ್ಯೂಸೆಕ್ ಗೂ ಅಧಿಕವಿದೆ. ಈಗಾಗಲೇ ಮೂರು ಕ್ರಸ್ಟ್ ಗೇಟ್‌ಗಳ ಮೂಲಕ ನದಿಗೆ ಐದರಿಂದ 50 ಸಾವಿರ ಕ್ಯೂಸೆಕ್‌ವರೆಗೆ ನೀರು ಹರಿಸಲಾಗುತ್ತಿದೆ.
ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ತೀರಾ ಕುಸಿದಿದೆ. 1633 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವುಳ್ಳ ಜಲಾಶಯದಲ್ಲಿ ಸುಮಾರು 33 ಟಿಎಂಸಿ ಹೂಳು ಸಂಗ್ರಹವಾಗಿದ್ದು, ಸಂಗ್ರಹ ಸಾಮರ್ಥ್ಯ 105 ಟಿಎಂಸಿಗೆ ಕುಸಿದಿದೆ. ಸದ್ಯ ಜಲಾಶಯದಲ್ಲಿ ಭಾನುವಾರ ನೀರಿನ ಮಟ್ಟ 1628.09 ಅಡಿ ಇದ್ದು, ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ಒಳಹರಿವಿದೆ. 7744 ಕ್ಯೂಸೆಕ್ ನೀರನ್ನು ನದಿ ಹಾಗೂ ಕಾಲುವೆಗಳ ಮೂಲಕ ಹೊರಬಿಡಲಾಗುತ್ತಿದ್ದು, 87.056 ಟಿಎಂಸಿ ನೀರು ಸಂಗ್ರಹವಿದೆ.
ತುಂಗಭದ್ರಾ ಜಲಾಶಯ ಬಹುತೇಕ ಭರ್ತಿಯಾದ ಹಿನ್ನೆಲೆಯಲ್ಲಿ ಬಳ್ಳಾರಿ ನಗರ ಹಾಗೂ ಜಿಲ್ಲೆಯ ರೈತರ ಒತ್ತಾಯದ ಮೇರೆಗೆ 100 ಕ್ಯೂಸೆಕ್ ನಂತೆ ನೀರನ್ನು ಎಚ್ ಎಲ್‌ಸಿ ಕಾಲುವೆಗೆ ಬಿಡುಗಡೆ ಮಾಡಲಾಯಿತು. ಇದಕ್ಕೆ ಟಿಬಿಬಿ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ ಗಂಗಾ ಪೂಜೆ ಸಲ್ಲಿಸಿ, ನೀರು ಬಿಡುಗಡೆ ಮಾಡಿದರು. ಸೋಮವಾರ ಸಂಜೆಯಿಂದ ಪವರ್ ಹೌಸ್ ಮೂಲಕ ಹರಿಸಲಾಗಿದೆ.