ಗೇಟ್ ಬಂದರೂ ಕೂಡಿ ಬಾರದ ಅಳವಡಿಕೆ ಭಾಗ್ಯ

21 MANJU 06
Published on

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ರೈತರ ಜೀವನಾಡಿ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್‌ ಕಳಚಿಬಿದ್ದು ಬರೋಬ್ಬರಿ 11 ತಿಂಗಳು ಕಳೆಯುತ್ತಿದೆ. ಜಲಾಶಯಕ್ಕೆ ಗೇಟ್ ಬಂದರೂ, ಅಳವಡಿಕೆ ಭಾಗ್ಯ ಇನ್ನು ಕೂಡಿ ಬಂದಿಲ್ಲ.

ಗುಜರಾತ ಮೂಲದ ಹಾರ್ಡ್‌ವೇರ್ ಟೂಲ್ಸ್‌ ಆ್ಯಂಡ್‌ ಮಷಿನರಿ ಪ್ರಾಜೆಕ್ಟ್‌ ಕಂಪನಿಯಿಂದ  49 ಟನ್ ತೂಕದ 9 ತುಂಡುಗಳ ಗೇಟ್‌ ಅನ್ನು ಗದಗ ಸಮೀಪದ ಅಡವಿಸೋಮಾಪುರದಲ್ಲಿ ಸಿದ್ಧಪಡಿಸಲಾಗಿದ್ದು, ಟ್ರಕ್‌ ಮೂಲಕ ಜಲಾಶಯದ ಆವರಣಕ್ಕೆ ಬಂದು ತಲುಪಿದೆ.

ಜಲಾಶಯದ ಒಳಹರಿವು ಗುರುವಾರ ಹಾಗೂ ಶುಕ್ರವಾರ 50 ಸಾವಿರ ಕ್ಯೂಸೆಕ್‌ ಗೂ ಅಧಿಕ ನೀರು ಜಲಾಶಯಕ್ಕೆ ಹರಿದು ಬಂದಿದೆ. ಶನಿವಾರ 38 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ತುಂಗಭದ್ರಾ ಮಂಡಳಿ ಅಧಿಕಾರಿಗಳು ಪರಿಣತ ತಜ್ಞ ಕನ್ನಯ್ಯ ನಾಯ್ಡು ಅಭಿಪ್ರಾಯ ತೆಗೆದುಕೊಂಡಾಗ ಭಾರೀ ಪ್ರಮಾಣದಲ್ಲಿ ಒಳಹರಿವು ಇರುವ ಹಿನ್ನೆಲೆಯಲ್ಲಿ ಈಗಲೇ ಗೇಟ್‌ ಅಳವಡಿಸುವುದು ಬೇಡ, ಸ್ಟಾಪ್‌ ಲಾಗ್‌ ಗಟ್ಟಿಯಾಗಿದೆ ಎಂದು ಸೂಚನೆ ನೀಡಿದ್ದಾರೆ. ಹಾಗಾಗಿ ಒಳ ಹರಿವು ತಗ್ಗಿದ ಬಳಿಕವಷ್ಟೇ ಗೇಟ್‌ ನಿರ್ಮಾಣ ಕಾರ್ಯ ನಡೆಯಲಿ ಎಂದು ಸಲಹೆ ನೀಡಿದ್ದಾರೆ. ಈಗ ತುಂಗಭದ್ರಾ ಮಂಡಳಿ ಅಧಿಕಾರಿಗಳು ಕೂಡ ಚರ್ಚಿಸಿ ಒಳಹರಿವು ತಗ್ಗಿದ ಬಳಿಕ, ಅಕ್ಟೋಬರ್‌ ಇಲ್ಲವೇ ನವೆಂಬರ್‌ನಲ್ಲಿ 19ನೇ ಗೇಟ್‌ಗೆ ಕ್ರಸ್ಟ್‌ಗೇಟ್‌ ಅಳವಡಿಸಲು ನಿರ್ಧರಿಸಿದ್ದಾರೆ.

ಹಾರ್ಡ್‌ವೇರ್ ಟೂಲ್ಸ್‌ ಆ್ಯಂಡ್‌ ಮಷಿನರಿ ಪ್ರಾಜೆಕ್ಟ್‌ ಕಂಪನಿಗೆ ಉಳಿದ 32 ಕ್ರಸ್ಟ್‌ಗೇಟ್‌ ಬದಲಿಸಿ, ಹೊಸ ಗೇಟ್‌ ನಿರ್ಮಾಣದ ಗುತ್ತಿಗೆಯನ್ನೂ ನೀಡಲಾಗಿದೆ. ಈಗ 19ನೇ ಕ್ರಸ್ಟ್‌ಗೇಟ್‌ ಸಿದ್ಧಗೊಂಡರೂ ಅಳವಡಿಸಲು ಒಳಹರಿವು ಅಡ್ಡಿಯಾಗಿದೆ. ತುಂಗಭದ್ರಾ ಜಲಾಶಯದ 19ನೇ ಗೇಟ್ 2024ರ ಆಗಸ್ಟ್‌ 10ರ ರಾತ್ರಿ ಕಳಚಿ ಬಿದ್ದಿತ್ತು. ಇದರಿಂದ 40 ಟಿಎಂಸಿಯಷ್ಟು ನೀರು ನದಿ ಪಾಲಾಗಿತ್ತು. ಆಗ ಪರಿಣತ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಸ್ಟಾಪ್‌ಲಾಗ್‌ ಅಳವಡಿಕೆ ಮಾಡಲಾಗಿತ್ತು. ಈಗ ಕ್ರಸ್ಟ್‌ಗೇಟ್‌ ನಿರ್ಮಾಣಗೊಂಡರೂ ಒಳಹರಿವಿನಲ್ಲಿ ಭಾರೀ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಗೇಟ್‌ ಅಳವಡಿಕೆ ಕಾರ್ಯವನ್ನು ಮುಂದೂಡಲಾಗುತ್ತಿದೆ.

ಡಿಸೆಂಬರ್ ನಂತರ ಅಳವಡಿಕೆ ಸಾದ್ಯತೆ

ಜಲಾಶಯಕ್ಕೆ ಈಗಾಗಲೇ 41.856 ಟಿಎಂಸಿ ನೀರು ಸಂಗ್ರಹವಾಗಿದೆ. ಕ್ರಸ್ಟ್ ಗೇಟ್ ವರೆಗೆ ನೀರು ಭರ್ತಿಯಾಗಿದೆ. ಒಳಹರಿವು ಪ್ರಮಾಣ ಕೂಡ ಹೆಚ್ಚಿರುವುದರಿಂದ 19ನೇ ಗೇಟ್ ಅಳವಡಿಸಿದ ಅಕ್ಟೋಬರ್ ಅಥವ ನವೆಂಬರ್ ತಿಂಗಳಲ್ಲಿ ಗೇಟ್ ಕೂರಿಸಲು ಟಿಬಿಬಿ ತಿರ್ಮಾನಿಸಿದರು ಅದು ಆಗುವ ಕೆಲಸವಲ್ಲ. ಈ ಭಾರಿ ಶೇ.80ರಷ್ಟು ಮಾತ್ರ ಜಲಾಶಯ ಭರ್ತಿ ಆಗಬೇಕು ಎಂದು ಟಿಬಿಬಿ ತಿರ್ಮಾನಿಸಿದೆ. ಇನ್ನೂ ಡಿಸೆಂಬರ್ ವರೆಗೆ ಇನ್ನೂ ಕ್ರಸ್ಟ್ ಗೇಟ್ ವರೆಗೆ ನೀರು ಇರಲಿದೆ. ಆದ್ದರಿಂದ ಗೇಟ್ ಅಳವಡಿಕೆ ಆಗಲ್ಲ. ಮತ್ತೇ ಡಿಸೆಂಬರ್ ಅಥವ ಜನವರಿ ನಂತರವೇ ಗೇಟ್ ಅಳಚಡಿಕೆ ಆಗಲಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net