

ಚೆನ್ನೈ: ಟ್ಯಾಕ್ಸಿ ಚಾಲಕರೊಬ್ಬರು 1 ಹಾಗೂ 2 ರೂ. ಮುಖಬೆಲೆಯ ಎಂಭತ್ತು ಸಾವಿರ ರೂಪಾಯಿಗಳ ನಾಣ್ಯಗಳನ್ನು ತುಂಬಿಕೊಂಡು ಬಂದು ಕೊಯಮತ್ತೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಪಾವತಿಸಿರುವ ಘಟನೆ ವರದಿಯಾಗಿದೆ.
ವರದಿಗಳ ಪ್ರಕಾರ, ಟ್ಯಾಕ್ಸಿ ಚಾಲಕನ ಪತ್ನಿ ಒಂದು ವರ್ಷದ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, 2 ಲಕ್ಷ ರೂ. ಜೀವನಾಂಶವನ್ನು ಪಾವತಿಸಲು ನ್ಯಾಯಾಲಯವು ಆದೇಶಿಸಿತ್ತು. ಆದರೆ ಆತನು ನೋಟಿನ ಬದಲಾಗಿ ಸೇಡಿನ ಕ್ರಮವಾಗಿ ನಾಣ್ಯಗಳಲ್ಲಿ ಹಣ ಪಾವತಿಸಿದ್ದು, ಡಿಸೆಂಬರ್ 18ರಂದು ಈ ಘಟನೆ ನಡೆದಿದೆ.
ಪತ್ನಿಯ ಮೇಲಿನ ಸೇಡಿನ ಕ್ರಮವಾಗಿ ವ್ಯಕ್ತಿಯು ನೋಟುಗಳ ಬದಲಾಗಿ ಚಿಲ್ಲರೆಯಲ್ಲಿ ನೀಡಿದ್ದು, ವ್ಯಕ್ತಿಯ ಈ ನಡೆಗೆ ಕೋರ್ಟ್ ಗರಂ ಆಗಿದೆ. ಇದಲ್ಲದೆ ಆತ ಉಳಿದ 1.20 ಲಕ್ಷ ರೂಪಾಯಿ ಮೊತ್ತ ಕೊರತೆ ಇದೆ ಎಂದು ನ್ಯಾಯಾಲಯಕ್ಕೆ ಹೇಳಿದ್ದು, ನ್ಯಾಯಾಧೀಶರು ಆತನಿಗೆ ಚಿಲ್ಲರೆ ಬದಲಾಗಿ ಒಟ್ಟು ಮೊತ್ತ 2 ಲಕ್ಷ ರೂಪಾಯಿಯನ್ನು ನೋಟುಗಳಲ್ಲಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಸದ್ಯ ವ್ಯಕ್ತಿ ಚಿಲ್ಲರೆ ತುಂಬಿಕೊಂಡು ಕೋರ್ಟ್ ಪ್ರವೇಶಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ವ್ಯಕ್ತಿಯ ನಡೆಯನ್ನು ಖಂಡಿಸಿದ್ದಾರೆ. ಕೆಲವರು ವಿಚ್ಛೇದನ ನೀಡಿದ ಪತ್ನಿಯದ್ದೆ ತಪ್ಪು ಎಂದು ಹೇಳಿದ್ದು, ಕೆಲವರು ನಾಣ್ಯಗಳನ್ನು ತಿರಸ್ಕರಿಸಿದ ನ್ಯಾಯಾಧೀಶರ ಕ್ರಮವನ್ನು ಖಂಡಿಸಿ ಕಮೆಂಟ್ ಹಾಕುತ್ತಿದ್ದಾರೆ.