

ನವದೆಹಲಿ: ಪರಿಸರ ಮಾಲಿನ್ಯ ತಡೆಯುವ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆ ಹಾಗೂ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಬ್ಯಾಟರಿ ಚಾಲಿತ ವಾಹನಗಳ ಮಾಲೀಕರಿಗೂ ಸಂತೋಷದ ಸುದ್ದಿಯೊಂದು ಹೊರಬಿದ್ದಿದೆ.
ಅದೇನೆಂದರೆ ಬ್ಯಾಟರಿ ಚಾಲಿತ ವಾಹನಗಳಿಗೆ ರಸ್ತೆ ತೆರಿಗೆ ವಿನಾಯಿತಿ ನೀಡಲಾಗಿದೆ. ಸರ್ಕಾರ ತನ್ನ ಹೊಸ ಎಲೆಕ್ಟ್ರಿಕ್ ವಾಹನ ನೀತಿಯಡಿ ಈ ಅನುಕೂಲ ಮಾಡಿಕೊಟ್ಟಿದೆ. ಅಂದಹಾಗೆ ಇಂಥದ್ದೊಂದು ಅವಕಾಶ ಮಾಡಿಕೊಟ್ಟಿರುವುದು ದೆಹಲಿ ಸರ್ಕಾರ.
ದೆಹಲಿ ಸರ್ಕಾರದ ಸಾರಿಗೆ ಇಲಾಖೆ ಈ ಕುರಿತು ಶನಿವಾರ ಆದೇಶ ಹೊರಡಿಸಿದ್ದಾಗಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ತಿಳಿಸಿದ್ದಾರೆ. ಎಲ್ಲ ಥರದ ಬ್ಯಾಟರಿ ಚಾಲಿತ ವಾಹನಗಳಿಗೆ ತಕ್ಷಣದಿಂದಲೇ ಅನ್ವಯಿಸುವಂತೆ ತೆರಿಗೆ ವಿನಾಯಿತಿ ಜಾರಿಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.