ಒಂದೇ ತಿಂಗಳಲ್ಲಿ ಪಾಲಿಕೆಗೆ 28.82 ಕೋಟಿ ರೂ. ತೆರಿಗೆ ಸಂಗ್ರಹ

tax collection in palike
ಶಿವಮೊಗ್ಗ ಮಹಾನಗರ ಪಾಲಿಕೆ ಆವರಣದಲ್ಲಿ ತೆರಿಗೆ ಪಾವತಿಗೆ ಸರದಿಯಲ್ಲಿ ನಿಂತಿದ್ದ ಕರದಾತರು.
Published on

ನವೀನ್ ಬಿಲ್ಗುಣಿ ಶಿವಮೊಗ್ಗ
ಪ್ರಸಕ್ತ ವರ್ಷ ಬರಗಾಲದಿಂದ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. ಕೆರೆ ಕಟ್ಟೆಗಳಲ್ಲ ಬರಿದಾಗಿ ಜನ ಜಾನುವಾರುಗಳಿಗೆ ಕುಡಿಯಲು ನೀರು ಸಿಗದಂತಾಗಿದೆ. ಕೆಲಸವಿಲ್ಲದೆ ಪರದಾಟ ನಡೆಸುವಂತಾಗಿದೆ. ಇಂತಹ ಸಂಕಷ್ಟದ ನಡುವೆಯೂ ಶಿವಮೊಗ್ಗ ಮಹಾನಗರ ಪಾಲಿಕೆಗೆ ಕೋಟಿ ಕೋಟಿ ರೂ. ತೆರಿಗೆ ರೂಪದಲ್ಲಿ ಹರಿದುಬಂದಿದೆ. ಒಂದೂವರೆ ತಿಂಗಳಲ್ಲಿ ಬರೋಬ್ಬರಿ 30.22 ಕೋಟಿ ರೂ. ಪಾಲಿಕೆ ಖಜಾನೆ ಸೇರಿದೆ.

ಜಿಲ್ಲೆಯ ಜನತೆ ಈ ಬಾರಿ ಬರಗಾಲದಿಂದ ಬೆಂದು ಬಳಲಿದ್ದಾರೆ. ರೈತರು ಮಾತ್ರವಲ್ಲ ಎಲ್ಲ ವರ್ಗದ ಜನರೂ ಮಳೆ, ಬೆಳೆ ಇಲ್ಲದೆ ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲೂ ಶಿವಮೊಗ್ಗದ ಜನತೆ ಮಹಾನಗರ ಪಾಲಿಕೆಗೆ ಒಂದೂವರೆ ತಿಂಗಳಲ್ಲೇ 30.22 ಕೋಟಿ ರೂ. ಆಸ್ತಿ ತೆರಿಗೆ ಪಾವತಿಸಿದ್ದಾರೆ. ಅದರಲ್ಲೂ ಏಪ್ರಿಲ್ ತಿಂಗಳಲ್ಲೇ ಶೇ.5ರಷ್ಟು ರಿಯಾಯಿತಿ ಸೌಲಭ್ಯ ಪಡೆದುಕೊಂಡು ಎಸ್‌ಎಎಸ್(ಸ್ವಯಂ ಘೋಷಿತ ಆಸ್ತಿ) ತೆರಿಗೆಯನ್ನು ಸಾವಿರಾರು ಆಸ್ತಿ ಮಾಲೀಕರು ತೆರಿಗೆ ಪಾವತಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ 1,07,160 ಅಧಿಕೃತ ಕರದಾತರಿದ್ದಾರೆ. ಇದರಲ್ಲಿ 61,164 ಮಂದಿ ಏಪ್ರಿಲ್‌ನಲ್ಲೇ ಕರ ಪಾವತಿಸಿದ್ದಾರೆ. ಪಾಲಿಕೆ ಪ್ರಸಕ್ತ 2024-25ನೇ ಸಾಲಿನಲ್ಲಿ 47.12 ಕೋಟಿ ರೂ. ವಿವಿಧ ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಿದೆ. ಏ.1ರಿಂದ 31ರವರೆಗೆ ಇದ್ದ ಶೇ.5ರಷ್ಟು ರಿಯಾಯಿತಿ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡಿರುವ ಕರದಾತರು ಎಸ್‌ಎಎಸ್ ತೆರಿಗೆ ಪಾವತಿಗೆ ಜೈ ಎಂದಿದ್ದಾರೆ.
ಕಳೆದ ವರ್ಷ ದಾಖಲೆ ಕರ ಸಂಗ್ರಹ
ಶಿವಮೊಗ್ಗ ಮಹಾನಗರ ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ 2023-24ನೇ ಸಾಲಿನಲ್ಲಿ ದಾಖಲೆ ಪ್ರಮಾಣದ ತೆರಿಗೆ ಸಂಗ್ರಹವಾಗಿತ್ತು. 45.32 ಕೋಟಿ ರೂ. ಗುರಿ ಹೊಂದಿದ್ದ ಪಾಲಿಕೆ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿತ್ತು. ಬರೋಬ್ಬರಿ 50 ಕೋಟಿ ರೂ.ಗೂ ಅಧಿಕ ತೆರಿಗೆ ಸಂಗ್ರಹಿಸಿತ್ತು. ನಗರಸಭೆ ಇದ್ದಾಗ ಹಾಗೂ ಮಹಾನಗರ ಪಾಲಿಕೆಯಾದ ಬಳಿಕ ಇಷ್ಟು ವರ್ಷಗಳ ಅವಧಿಯಲ್ಲಿ ಈ ಪ್ರಮಾಣದ ತೆರಿಗೆ ಸಂಗ್ರಹ ಆಗಿರಲಿಲ್ಲ. ಪ್ರತಿ ಬಾರಿಯೂ ಕಂದಾಯ ಅಧಿಕಾರಿಗಳು ಅನೇಕ ರೀತಿ ಸರ್ಕಸ್ ಮಾಡಿದರೂ ತೆರಿಗೆ ವಸೂಲಾತಿ ಗುರಿ ತಲುಪುವುದೇ ಕಷ್ಟವಾಗುತ್ತಿತ್ತು. ಆದರೆ ಕಳೆದ ಬಾರಿ ಜಾಹೀರಾತು, ಸ್ವಯಂಘೋಷಿತ ಆಸ್ತಿ ತೆರಿಗೆ ಸೇರಿ ಬೇರೆ ಬೇರೆ ತೆರಿಗೆ ಸೇರಿ 50 ಕೋಟಿ ರೂ. ದಾಟಿದ್ದು ವಿಶೇಷವಾಗಿತ್ತು.
ತೆರಿಗೆಯನ್ನೇ ಪಾವತಿಸದ ಹಲವರು
2023-24ನೇ ಸಾಲಿನಲ್ಲಿ 1,01,369 ಮಂದಿ ತೆರಿಗೆದಾರಿದ್ದರು. 2024-25ನೇ ಸಾಲಿನಲ್ಲಿ 1,07,160ಕ್ಕೆ ಏರಿಕೆಯಾಗಿದೆ. ಒಂದೇ ವರ್ಷದಲ್ಲಿ 5,700ಕ್ಕೂ ಅಧಿಕ ಕರದಾತರು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಆಗಿದ್ದಾರೆ. ನಗರ ಬೆಳೆದಂತೆ ಪ್ರತಿ ವರ್ಷವೂ 4-6 ಸಾವಿರ ಹೊಸ ಖಾತೆದಾರರು ಸೃಷ್ಟಿಯಾಗುತ್ತಿದ್ದಾರೆ. ಈ ನಡುವೆ ಪಾಲಿಕೆ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ತೆರಿಗೆಯನ್ನೇ ಪಾವತಿಸದ ಇನ್ನೂ 6-7 ಸಾವಿರ ಆಸ್ತಿ ಮಾಲೀಕರಿದ್ದಾರೆ. ಅವರು ಸಹ ಸಕಾಲಕ್ಕೆ ತೆರಿಗೆ ಪಾವತಿಸಿದರೆ ಪಾಲಿಕೆ ಆದಾಯ ಮತ್ತಷ್ಟು ಹೆಚ್ಚಾಗಲಿದೆ.

4.80 ಕೋಟಿ ರೂ. ದಂಡ ವಸೂಲಿ!
ಕಳೆದ ಬಾರಿ ಪಾಲಿಕೆ 45.32 ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಹೊಂದಿತ್ತು. ಅಷ್ಟೂ ತೆರಿಗೆ ಸಂಗ್ರಹಿಸುವ ಜತೆಗೆ ಬರೋಬ್ಬರಿ 4.80 ಕೋಟಿ ರೂ. ದಂಡ ಸಂಗ್ರಹಿಸಿತ್ತು. ಏಪ್ರಿಲ್ ತಿಂಗಳಲ್ಲಿ ಶೇ.5ರಷ್ಟು ರಿಯಾಯಿತಿ ಇದ್ದರೆ, ಮೇ ಮತ್ತು ಜೂನ್ ತಿಂಗಳಲ್ಲಿ ಯಾವುದೇ ರಿಯಾಯಿತಿ ಮತ್ತು ದಂಡ ವಿಧಿಸದೇ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗುತ್ತದೆ. ಜುಲೈ 1ರಿಂದ ಸ್ವಯಂಪ್ರೇರಿತವಾಗಿ ಶೇ.2ರಷ್ಟು ದಂಡ ಬೀಳಲಿದೆ. ಕರದಾತರು ಬ್ಯಾಂಕ್‌ಗೆ ಹೋಗಿ ಹಳೇ ತೆರಿಗೆ ಪಾವತಿಸಲು ಮುಂದಾದರೆ ಅದನ್ನು ಸ್ವೀಕರಿಸುವುದಿಲ್ಲ. ಶೇ.2ರಷ್ಟು ದಂಡದೊಂದಿಗೆ ಪಾವತಿಸುವುದು ಅನಿವಾರ್ಯವಾಗಲಿದೆ.

ವರ್ಷ ಕರದಾತರು ತೆರಿಗೆ ಸಂಗ್ರಹ(ಕೋಟಿ ರೂ.)
2017-18 76939 17.91
2018-19, 74,840 21.17
2019-20 81,356 23.66
2020-21 84919 25.98
2021-22 99,247 34.49
2022-23 1,01,369 50
2023-24 1,07,160 30.22(ಮೇ 15ವರೆಗೆ)

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಪ್ರಸಕ್ತ ವರ್ಷ ಒಂದೂವರೆ ತಿಂಗಳಲ್ಲೇ 30.22 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. 47.12 ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಹೊಂದಿದ್ದು ಏಪ್ರಿಲ್ ತಿಂಗಳಲ್ಲೇ ಶೇ.5ರಷ್ಟು ರಿಯಾಯಿತಿ ಪಡೆದು 28.82 ಕೋಟಿ ರೂ. ಎಸ್‌ಎಎಸ್ ತೆರಿಗೆ ಪಾವತಿಸಿದ್ದಾರೆ. ಶಿವಮೊಗ್ಗದ ಕರದಾತರು ಸಕಾಲಕ್ಕೆ ತೆರಿಗೆ ಪಾವತಿಸುತ್ತಿದ್ದಾರೆ. ಈ ವರ್ಷ ಹೊಸ ಖಾತೆದಾರರು ಹೆಚ್ಚಾಗಿದ್ದು 55 ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಹೊಂದಿದ್ದೇವೆ. ನಾಗೇಂದ್ರ, ಶಿವಮೊಗ್ಗ ಮಹಾನಗರ ಪಾಲಿಕೆ ಕಂದಾಯ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net