'ಹಚ್ಚೆ' ಹಾಕಿಸೋದ್ರಿಂದ ಕ್ಯಾನ್ಸರ್ ಬರುತ್ತೆ ಹುಷಾರ್? Tattoo

Tattoos
Published on

Tattoo | ಇತ್ತೀಚೆಗೆ ಈ ಹಚ್ಚೆ (ಟ್ಯಾಟೂ) ಹಾಕಿಸಿಕೊಳ್ಳುವ ಹುಚ್ಚು ಯುವಕ ಹಾಗೂ ಯುವತಿಯರಲ್ಲಿ ಹೆಚ್ಚಾಗಿದೆ. ಜಗತ್ತಿನಾದ್ಯಂತ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮಿಷ್ಟದಂತೆ ಹಚ್ಚೆ ಹಾಕಿಸಿಕೊಳ್ತಾರೆ. ಹಚ್ಚೆ ಹಾಕಿಸಿಕೊಳ್ಳುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗ್ತಾ ಇರೋದ್ರಿಂದ ಈ ಬಗ್ಗೆ ಒಂದು ಅಧ್ಯಯನ ನಡೆಸಲಾಗಿದೆ.

ಹಚ್ಚೆ ಹಾಕಿಸಿಕೊಳ್ಳುವುದರಿಂದ ಕೆಲವು ರೀತಿಯ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಇತ್ತೀಚೆಗೆ ನಡೆಸಿದ ಹೊಸ ಅಧ್ಯಯನವೊಂದು ಹೇಳಿದೆ. ಈ ಸಂಶೋಧನೆಗಾಗಿ 2000 ಕ್ಕೂ ಹೆಚ್ಚು ಮಕ್ಕಳ ಡೇಟಾವನ್ನು ವಿಶ್ಲೇಷಿಸಲಾಗಿದ್ದು, ಅದರಲ್ಲಿ ಹಚ್ಚೆ ಹಾಕಿಸಿಕೊಳ್ಳದವರಲ್ಲಿ ಕ್ಯಾನ್ಸರ್ ಅಂಶ ಕಂಡು ಬಂದಿಲ್ಲ ಎಂದು ಪಬ್ಲಿಕ್ ಹೆಲ್ತ್ ಜರ್ನಲ್‌ನಲ್ಲಿ ನಡೆಸಿದ ಅಧ್ಯಯನ ತಿಳಿಸಿದೆ. ಹಚ್ಚೆ ಹಾಕಿಸಿಕೊಳ್ಳದವರಿಗೆ ಹೋಲಿಸಿದರೆ, ಯಾವುದೇ ರೀತಿಯ ಹಚ್ಚೆ ಹಾಕಿಸಿಕೊಂಡವರಲ್ಲಿ ಶೇ.62 ರಷ್ಟು ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆಗಳು ಹೇಳಿವೆ.

ಹಚ್ಚೆಯಿಂದಾಗುವ ಅಪಾಯ ಏನು?

ಈ ಬಗ್ಗೆ ಸಂಶೋಧನಾ ತಂಡ ಮಾಹಿತಿ ಹಂಚಿಕೊಂಡಿದ್ದು, ಹಚ್ಚೆ ಹಾಕಿಸಿಕೊಂಡ ವ್ಯಕ್ತಿಗಳಲ್ಲಿ ಲಿಂಫೋಮಾ ಮತ್ತು ಚರ್ಮದ ಕ್ಯಾನ್ಸರ್‌ಗಳ ಅಪಾಯ ಹೆಚ್ಚಾಗಿ ಕಂಡುಬರುತ್ತದೆ. ಹಚ್ಚೆ ಶಾಯಿ ಸುತ್ತಮುತ್ತಲಿನ ಜೀವಕೋಶಗಳೊಂದಿಗೆ ಸಂವಹನ ನಡೆಸುವುದರಿಂದ ದೇಹದ ಮೇಲೆ ತೀವ್ರ ಪರಿಣಾಮಗಳು ಉಂಟಾಗಬಹುದು ಎಂದು ಕಳವಳ ವ್ಯಕ್ತಪಡಿಸಿದೆ. ಹಚ್ಚೆ ಶಾಯಿಯ ಕಣಗಳು ದೇಹದ ರಕ್ತಸ್ರಾವದ ಮೂಲಕ ಇತರ ಅಂಗಗಳಿಗೆ ಸಾಗಿ ಅನೇಕ ದುಷ್ಪರಿಣಾಮ ಉಂಟು ಮಾಡುತ್ತದೆ ಎನ್ನಲಾಗಿದೆ.

ಅಂಗೈಗಿಂತ ದೊಡ್ಡದಾದ ಹಚ್ಚೆ ಹಾಕಿಸಿಕೊಂಡವರಲ್ಲಿ ಚರ್ಮದ ಕ್ಯಾನ್ಸರ್ ಬರುವ ಸಾಧ್ಯತೆ ಶೇ.137 ರಷ್ಟು ಹೆಚ್ಚಾಗಿದೆ. ಜೊತೆಗೆ ರಕ್ತದ ಕ್ಯಾನ್ಸರ್‌ನ ಒಂದು ವಿಧವಾದ ಲಿಂಫೋಮಾ ಬರುವ ಅಪಾಯ ಶೇ.173 ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿದು ಬಂದಿದೆ.

ಟ್ಯಾಟೂ ಹಾಕಿದ ಸ್ಥಳ ದೀರ್ಘಕಾಲದ ಉರಿಯೂತಕ್ಕೆ ಕಾರಣವಾಗಬಹುದು ಮತ್ತು ಅಸಹಜ ಜೀವಕೋಶ ಪ್ರಸರಣದ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚಾಗಿ ಬಳಸಲಾಗುವ ಹಚ್ಚೆ ಶಾಯಿ ಕಪ್ಪು ಬಣ್ಣದ್ದಾಗಿದ್ದು, ಇದು ಸಾಮಾನ್ಯವಾಗಿ ಕಾರ್ಬನ್ ಬ್ಲ್ಯಾಕ್‌ನಂತಹ ಮಸಿ ಉತ್ಪನ್ನಗಳನ್ನು ಹೊಂದಿರುತ್ತದೆ ಎನ್ನಾಲಾಗಿದ್ದು, ಇದನ್ನು ಇಂಟರ್​ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC) ಸಂಸ್ಥೆ ಕ್ಯಾನ್ಸರ್ ಕಾರಕ ಎಂದು ಪಟ್ಟಿ ಮಾಡಿದೆ.

ಕೆಲವು ದೇಶಗಳಲ್ಲಿ ಹಚ್ಚೆ ಹಾಕಿಸಿಕೊಳ್ಳುವವರ ಒಟ್ಟಾರೆ ಪ್ರಮಾಣವು ಶೇಕಡಾ 20 ರಿಂದ 25 ಕ್ಕೆ ಏರಿಕೆಯಾಗಿದ್ದು, ಯುವ ಪೀಳಿಗೆಯಲ್ಲಿ ಇದು ಸುಮಾರು ಎರಡು ಪಟ್ಟು ಹೆಚ್ಚಾಗಿರುವುದಾಗಿ ಕಂಡುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net