ಮಂಗನಿಗೆ ಹೆಂಡ ಕುಡಿಸುತ್ತಿದ್ದ ಕಲಾವಿದ ಸಿಂಗ್ ಪೊಲೀಸರ ಬಲೆಗೆ

monkey
Published on

ಚಂಡೀಗಢ: ಈ ಫ್ಯಾಷನ್ ಲೋಕದ ಕಲಾವಿದರ ಭಾವನೆಗಳೇ ವಿಚಿತ್ರವಾಗಿರುತ್ತವೆ.  ಇವರ ಆಸಕ್ತಿ, ಅಭಿರುಚಿಗಳೂ ಭಿನ್ನವಾಗಿರಬೇಕೆಂದೇ ಬಯಸುತ್ತಾರೆ. ಆದರೆ ಕೆಲವೊಮ್ಮೆ ಇವೇ ವಿಚಿತ್ರ ಭಾವನೆಗಳು ಅವರಿಗೆ ಕಂಟಕವಾಗುತ್ತವೆ.  ಇಲ್ಲದ ಆವಾಂತರ ಸೃಷ್ಟಿಸುತ್ತವೆ. ಅಂಥದ್ದೇ ಒಂದು ಪ್ರಸಂಗದಲ್ಲಿ ಮಂಗನೊಂದಿಗೆ ಆತ್ಮೀಯತೆ ಬೆಳೆಸಿಕೊಂಡ ಕಲಾವಿದನೊಬ್ಬ ಅದಕ್ಕೆ ಹೆಂಡ ಕುಡಿಸುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ರಿಯಾಲಿಟಿ ಶೋ 'ಏಸ್ ಆಫ್ ಸ್ಪೇಸ್' ನಲ್ಲಿ ಭಾಗವಹಿಸಿದ ನಂತರ ಖ್ಯಾತಿಯ ಉತ್ತುಂಗಕ್ಕೇರಿದ, ಹಚ್ಚೆ ಕಲಾವಿದ ಕಮಲ್​ಜಿತ್ ಸಿಂಗ್ ಮಂಗನನ್ನು ಸೆರೆಹಿಡಿದು, ಅದಕ್ಕೆ ವೈನ್ ಎಂದು ಹೇಳಲಾಗುವ ಕೆಂಪು ಮಿಶ್ರಣ ಕುಡಿಸುತ್ತಿದ್ದಾಗಲೇ ಆತ ಮತ್ತು ಆತನ ವ್ಯವಸ್ಥಾಪಕನನ್ನು ಪೊಲೀಸರು ಬಂಧಿಸಿದ್ದಾರೆ.
ಆದರೆ ಈ ಅಪವಾದವನ್ನು ತಳ್ಳಿಹಾಕಿದ ಕಮಲ್​​ಜಿತ್,  ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ಗಾಯಗೊಂಡಿದ್ದ ಕೋತಿಯನ್ನು ರಕ್ಷಿಸಿದ್ದು, ತಾನು ಮಂಗನಿಗೆ ಸೇಬು ಮತ್ತು ದಾಳಿಂಬೆ ರಸದ ಮಿಶ್ರಣವನ್ನು ಕುಡಿಸುತ್ತಿದ್ದೇನೆ ಎಂದಿದ್ದಾನೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕೋತಿಯನ್ನು ಬಂಧಿಸುವುದು ಅಪರಾಧ ಎಂದು ತಿಳಿದಾಗ ತಾನು ಮಂಗನನ್ನು ಬಿಡುಗಡೆ ಮಾಡಿದೆ ಎಂದು ಸಿಂಗ್ ಹೇಳಿದ್ದಾನೆ.


ಆತ ಚಂಡೀಗಢದ ಸೆಕ್ಟರ್ 35 ರಲ್ಲಿ ಕಾಮ್ಜಿಂಕ್ ಜೋನ್ ಹೆಸರಿನ ಟ್ಯಾಟೂ ಸ್ಟುಡಿಯೋವನ್ನು ನಡೆಸುತ್ತಿದ್ದಾನೆ. ಸಿಂಗ್ ಮಂಗನೊಂದಿಗಿರುವ ಚಿತ್ರಗಳನ್ನು      ಇನ್​​ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ನಂತರ ಆತನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.   ಮೂಲಗಳ ಪ್ರಕಾರ, ಸಿಂಗ್ ನನ್ನು ಪೊಲೀಸರು ಎರಡು ಬಾರಿ ವಿಚಾರಣೆ ನಡೆಸಿದರೂ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದಾನೆ. ಆದರೆ ಇನ್‌ಸ್ಟಾಗ್ರಾಮ್ ಖಾತೆಯ ಛಾಯಾಚಿತ್ರಗಳು ಮತ್ತು ಸ್ಕ್ರೀನ್‌ಶಾಟ್‌ಗಳು ಅವನ ವಿರುದ್ಧ ಸಾಕ್ಷಿ ನೀಡುತ್ತವೆ.
ಸಿಂಗ್ ಹೇಳಿಕೆ ನಂಬಲರ್ಹವಾಗಿಲ್ಲ ಎಂದು ಮುಖ್ಯ ವನ್ಯಜೀವಿ ವಾರ್ಡನ್ ದೇಬಂದ್ರ ದಲೈ ತಿಳಿಸಿದ್ದಾರೆ. ಆತ ಕೋತಿಯನ್ನು ಬಚ್ಚಿಟ್ಟಿದ್ದಾನೆ ಮತ್ತು ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. "ಜಲಂಧರ್​​​ನಲ್ಲಿರುವ ಆತನ ಮನೆಯನ್ನು ಪರೀಕ್ಷಿಸಲು ನಾವು ಪಂಜಾಬ್ ನಲ್ಲಿರುವ ನಮ್ಮ ಸಹೋದ್ಯೋಗಿಗಳ ಸಹಾಯವನ್ನು ತೆಗೆದುಕೊಳ್ಳುತ್ತೇವೆ ಎಂದು ದಲೈ ಹೇಳಿದ್ದಾರೆ. 


ನಾನು ಗಾಯಗೊಂಡ ಸ್ಥಿತಿಯಲ್ಲಿರುವ ಮಂಗವನ್ನು ಕಸೌಲಿ ರಸ್ತೆಯಿಂದ ರಕ್ಷಿಸಿದ್ದೇನೆ. ಪ್ರಾಣಿ ನನ್ನೊಂದಿಗೆ ವಾತ್ಸಲ್ಯವನ್ನು ಬೆಳೆಸಿಕೊಂಡಿದೆ. ನಾನು ಕೋತಿಯೊಂದಿಗಿರುವ ನನ್ನ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದೇನೆ. ನಾನು ಕೋತಿಗೆ ನೀಡಿದ ಪಾನೀಯ ಸೇಬು ಮತ್ತು ದಾಳಿಂಬೆಯ ಮಿಶ್ರ ರಸವಾಗಿತ್ತು. ಎಂದಿದ್ದಾನೆ. ಆದರೆ ಇದನ್ನು ತಳ್ಳಿಹಾಕಿದ ಅಧಿಕಾರಿಗಳು ಹಚ್ಚೆ ಕಲಾವಿದನ ವಿರುದ್ಧ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net