

ನವದೆಹಲಿ: ಆರ್ಥಿಕ ಸಂಕಷ್ಟದ ಕಾಲದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆ ಹೆಚ್ಚಿಸುವ ದೃಷ್ಟಿಯಿಂದ ದೊಡ್ಡ ಕೈಗಾರಿಕೋದ್ಯಮ ಮತ್ತು ಕಾರ್ಪೆರೇಟ್ ಕಂಪನಿಗಳಿಗೆ ಪೇಮೆಂಟ್ ಬ್ಯಾಂಕ್ ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅವಕಾಶ ಕಲ್ಪಿಸಿದೆ. ದೇಶದ ಪ್ರತಿಷ್ಠಿತ ಟಾಟಾ, ಬಿರ್ಲಾ, ಅಂಬಾನಿ ಇನ್ನಿತರ ಸಮೂಹಗಳಿಗೆ ಬ್ಯಾಂಕ್ ನಡೆಸಲು ಅನುಮತಿ ನೀಡಬಹುದು ಎಂದು ಶಿಫಾರಸು ಮಾಡಿದೆ. ಎನ್ಬಿಎಫ್ಸಿ(ಬ್ಯಾಂಕೇತರ ಹಣಕಾಸು ಸಂಸ್ಥೆ)ಗಳನ್ನು ಬ್ಯಾಂಕ್ ಆಗಿ ಪರಿವರ್ತಿಸಲು ಅವಕಾಶ ನೀಡಬಹುದೆಂದು ಆರ್ಬಿಐ ಸಲಹೆ ನೀಡಿದೆ. ರಿಲಯನ್ಸ್ ಇಂಡಸ್ಟ್ರೀಸ್, ಅದಿತ್ಯ ಬಿರ್ಲಾ ನುವೊ, ಟೆಕ್ ಮಹೀಂದ್ರಾ, ಟಾಟಾ ಸನ್ಸ್, ಸನ್ ಫರ್ವ ಇನ್ನಿತರ ಕಂಪನಿಗಳು ಬ್ಯಾಂಕ್ ತೆರೆಯಲು ಅರ್ಜಿ ಹಾಕಿವೆ. ಈ ಪೈಕಿ ಕೆಲವು ಕಂಪನಿಗಳು ಕಾರ್ಯಸಾಧ್ಯತೆಯ ಅಂಜಿಕೆಯಿಂದ ಅರ್ಜಿ ವಾಪಸ್ ಪಡೆದಿವೆ.
ಈಗ ಪರವಾನಗಿ ಪಡೆಯಲು ಅರ್ಹವಾಗಿರುವ ಕಂಪನಿಗಳು ಎಚ್ಡಿಎಫ್ಸಿ ಮತ್ತು ಐಸಿಐಸಿಐ ಬ್ಯಾಂಕ್ಗಳಂತೆ ಖಾಸಗಿ ವಲಯದಲ್ಲಿ ಪೂರ್ಣಪ್ರಮಾಣದಲ್ಲಿ ಬ್ಯಾಂಕ್ ತೆರೆಯಬಹುದಾಗಿದೆ ಎಂದು ಆರ್ಬಿಐ ರಚಿಸಿದ್ದ ಆಂತರಿಕ ಕಾರ್ಯನಿರ್ವಹಣಾ ಗುಂಪು (ಐಡಬ್ಲ್ಯುಜಿ) ಶುಕ್ರವಾರ ಬಹಿರಂಗಗೊಳಿಸಿದ ವರದಿ ತಿಳಿಸಿದೆ.
ಬ್ಯಾಂಕಿಂಗ್ ಚಟುವಟಿಕೆಗೆ ಒಳಪಡದ ಜನರಿಗೂ ಬ್ಯಾಂಕ್ ಸೇವೆ ದೊರೆಯಬೇಕೆಂಬ ಉದ್ದೇಶದಿಂದ ಪೇಮೆಂಟ್ ಬ್ಯಾಂಕ್ ಮತ್ತು ಸಣ್ಣ ಬ್ಯಾಂಕ್ಗಳನ್ನು ತೆರೆಯಲು ಅನುಮತಿ ನೀಡಲಾಗುತ್ತಿದೆ. ಆದರೆ, 1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತಂದ ನಂತರವಷ್ಟೇ ಈ ಹೊಸ ಬ್ಯಾಂಕ್ಗಳು ಕಾರ್ಯಾರಂಭ ಮಾಡಬಹುದಾಗಿದೆ ಎಂದು ಆರ್ಬಿಐನ ಐಡಬ್ಲ್ಯುಜಿ ಸ್ಪಷ್ಟಪಡಿಸಿದೆ.
ಬ್ಯಾಂಕ್ಗಳ ಪ್ರವರ್ತಕರ ಪಾಲುದಾರಿಕೆಯನ್ನು ಏರಿಕೆ ಮಾಡುವುದು ದೀರ್ಘಾವಧಿಯ ಸೇವೆಯ (15 ವರ್ಷ) ದೃಷ್ಟಿಯಿಂದ ಔಚಿತ್ಯವೂ ಆಗಿದೆ. ಹೀಗಾಗಿ ಸದ್ಯ ಶೇ. 15 ಇರುವ ಮಿತಿಯನ್ನು ಶೇ. 26ರವರೆಗೂ ಏರಿಸಬಹುದು. ಇದು ಆಯಾಯ ಬ್ಯಾಂಕ್ಗಳ ಇಕ್ವಿಟಿ ಷೇರಿಗೆ ಅನುಗುಣವಾಗಿರಬೇಕು ಎಂದು ಐಡಬ್ಲ್ಯುಜಿ ಹೇಳಿದೆ.
ಕಳೆದ ಜೂನ್ 12ರಂದು ಐಡಬ್ಲ್ಯುಜಿ ರಚಿಸಿದ್ದ ಆರ್ಬಿಐ, ಖಾಸಗಿ ಬ್ಯಾಂಕಿಂಗ್ ವಲಯದಲ್ಲಿ ಮಾಲೀಕತ್ವ ಮಾರ್ಗದರ್ಶಿ ಮತ್ತು ಕಾರ್ಪೆರೇಟ್ ಸಂರಚನೆಯನ್ನು ವಿಸ್ತರಿಸುವ ಸಾಧಕ-ಬಾಧಕ ಕುರಿತು ಪರಿಶೀಲಿಸುವ ಹೊಣೆಯನ್ನು ವಹಿಸಿತ್ತು. ಈಗ ಅದರ ವರದಿ ಬಿಡುಗಡೆ ಮಾಡಿದೆ. ಈ ವರದಿಯ ಬಗ್ಗೆ ಸಾರ್ವಜನಿಕರು ಜನವರಿ 15ರೊಳಗೆ ಆಕ್ಷೇಪ ಅಥವಾ ಸಲಹೆ ನೀಡಬಹುದಾಗಿದೆ.
ಹಿಂದೆ ನೀಡಿದ್ದ ಪರವಾನಗಿ
ಆರ್ಬಿಐ ಏಳು ವರ್ಷದ ಹಿಂದೆ ಎರಡು ಕಂಪನಿಗಳಿಗೆ ಬ್ಯಾಂಕ್ ತೆರೆಯಲು ಅನುಮತಿ ನೀಡಿತ್ತು. ಐಡಿಎಫ್ಸಿ ಫಸ್ಟ್ ಬ್ಯಾಂಕ್ ಮತ್ತು ಬಂಧನ್ ಬ್ಯಾಂಕ್ಗಳು ಕಾರ್ಯಾರಂಭ ಮಾಡಿದ್ದವು. ಅದಕ್ಕೂ ಹಿಂದೆ ಕೊಟಾಕ್ ಮಹೀಂದ್ರ ಮತ್ತು ಯೆಸ್ ಬ್ಯಾಂಕ್ಗಳು ಅನುಮತಿ ಪಡೆದುಕೊಂಡಿದ್ದವು. ಈಗ ಯೆಸ್ ಬ್ಯಾಂಕ್ ನಷ್ಟದ ಸುಳಿಯಲ್ಲಿ ಸಿಲುಕಿಕೊಂಡಿದೆ.
ಪರಿವರ್ತನೆಗೆ ಅವಕಾಶ
ಕೈಗಾರಿಕೋದ್ಯಮ ಇಲ್ಲವೆ ಕಾರ್ಪೆರೇಟ್ ಸಮೂಹ ಯಶಸ್ವಿಯಾಗಿ 10 ವರ್ಷಗಳಿಂದ ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು (ಎನ್ಬಿಎಫ್ಸಿ) ನಡೆಸುತ್ತಿದ್ದರೆ ಮತ್ತು ಇದರ ಆಸ್ತಿ ಮೌಲ್ಯ -ಠಿ; 50 ಸಾವಿರ ಕೋಟಿಗೂ ಹೆಚ್ಚಿದ್ದರೆ ಇಂಥ ಎನ್ಬಿಎಫ್ಸಿಗಳನ್ನು ಬ್ಯಾಂಕ್ ಆಗಿ ಪರಿವರ್ತಿಸಬಹುದಾಗಿದೆ ಎಂದು ಐಡಬ್ಲ್ಯುಜಿ ಸಲಹೆ ನೀಡಿದೆ. ಆದಿತ್ಯ ಬಿರ್ಲಾ ಸಮೂಹ, ಬಜಾಜ್ ಸಮೂಹ, ಮಹೀಂದ್ರಾ ಆಂಡ್ ಮಹೀಂದ್ರಾ, ಟಾಟಾ ಸನ್ಸ್ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಎನ್ಬಿಎಫ್ಸಿಗಳನ್ನು ನಡೆಸುತ್ತಿವೆ. ಈ ಎನ್ಬಿಎಫ್ಸಿಗಳು ಮಧ್ಯಮ ಶ್ರೇಣಿಯ ಬ್ಯಾಂಕ್ಗಳಿಗಿಂತ ಹಿರಿದಾಗಿವೆ.
ಪರಿಣಾಮ ಏನು?
ಸದ್ಯದ ಸ್ಥಿತಿ ಏನು?
ಸಾರ್ವಜನಿಕ ವಲಯದ (ಪಿಎಸ್ಬಿ) ಬ್ಯಾಂಕ್ಗಳನ್ನು ವಿಲೀನಗೊಳಿಸಿ ಆರೇಳು ದೊಡ್ಡ ಬ್ಯಾಂಕ್ಗಳನ್ನು ಈಗಾಗಲೇ ಸರ್ಕಾರ ರಚಿಸಿದೆ. ಇದರಿಂದ ವಸೂಲಾಗದ ಸಾಲ ಮತ್ತು ಅನುತ್ಪಾದಕ ಆಸ್ತಿಯ (ಎನ್ಪಿಎ) ಒತ್ತಡದಲ್ಲಿದ್ದ ಬ್ಯಾಂಕ್ಗಳು ಲಾಭದಾಯಕ ಬ್ಯಾಂಕ್ಗಳ ಜತೆ ಸೇರಿವೆ. ವಿಲೀನವಾದ ಬ್ಯಾಂಕ್ಗಳ ಆಸ್ತಿ -ಠಿ; 10 ಲಕ್ಷ ಕೋಟಿಗೂ ಹೆಚ್ಚಾಗಿದೆ. ದೊಡ್ಡ ಪಿಎಸ್ಬಿಗಳಂತೆ ಖಾಸಗಿ ವಲಯದಲ್ಲೂ ನಾಲ್ಕೈದು ದೊಡ್ಡ ಬ್ಯಾಂಕ್ಗಳಿವೆ.
ಬಂಡವಾಳ ದ್ವಿಗುಣ
ಹೊಸ ಬ್ಯಾಂಕ್ ಆರಂಭಕ್ಕಿದ್ದ -ಠಿ; 500 ಕೋಟಿ ಕನಿಷ್ಠ ಬಂಡವಾಳವನ್ನು -ಠಿ; 1000 ಕೋಟಿಗೆ ಏರಿಸುವಂತೆ ಐಡಬ್ಲ್ಯುಜಿ ಶಿಫಾರಸು ಮಾಡಿದೆ. ಸಣ್ಣ ಗಾತ್ರದ ಬ್ಯಾಂಕ್ಗೆ -ಠಿ; 200 ಕೋಟಿಯ ಕನಿಷ್ಠ ಬಂಡವಾಳವನ್ನು -ಠಿ; 300 ಕೋಟಿಗೆ ಹೆಚ್ಚಿಸಲೂ ಸಹ ಸಲಹೆ ನೀಡಿದೆ.
ಉತ್ತಮ ಮಾರ್ಗವೇ?
ಎನ್ಬಿಎಫ್ಸಿಗಳ ಆಸ್ತಿ ಮತ್ತು ನಷ್ಟಕ್ಕೆ ತಾಳಮೇಳ ಇಲ್ಲವಾಗಿದೆ. ಇಂಥ ಎನ್ಬಿಎಫ್ಸಿಗಳ ಸಂಖ್ಯೆ ಹೆಚ್ಚಿದರೆ ಅದು ಇಡೀ ಹಣಕಾಸು ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಏಕೆಂದರೆ ಈ ಎನ್ಬಿಎಫ್ಸಿಗಳು ಬ್ಯಾಂಕ್ ಅಥವಾ ಮ್ಯುಚುವಲ್ ಫಂಡ್ ಇಲ್ಲವೆ ವಿಮಾ ಕಂಪನಿಗಳಿಂದ ಸಾಲ ಪಡೆದಿರುತ್ತವೆ. ಹೀಗಾಗಿ ಎನ್ಬಿಎಫ್ಸಿಗಳ ಬೆಳವಣಿಗೆಯ ಮೇಲೆ ನಿಗಾ ಇರಿಸದಿದ್ದರೆ ಅವುಗಳು ಭವಿಷ್ಯದಲ್ಲಿ ಸಾಲದ ಕೂಪದಲ್ಲಿ ಸಿಲುಕಿಕೊಂಡು ಬಿಡುತ್ತವೆ. ಆದ್ದರಿಂದ ಅವುಗಳನ್ನು ಬ್ಯಾಂಕ್ಗಳನ್ನಾಗಿ ಪರಿರ್ವತಿಸಲು ಅವಕಾಶ ನೀಡುವುದು ಉತ್ತಮ ಮಾರ್ಗ ಎಂಬುದು ಆರ್ಬಿಐ ಸಲಹೆಯಾಗಿದೆ.
2013ಕ್ಕಿಂತ ಹಿಂದೆ ಲೈಸೆನ್ಸ್ ಪಡೆದ ಬ್ಯಾಂಕ್ಗಳು ಕಾರ್ಯನಿರ್ವಹಣೇತರ ಹಣಕಾಸು ಹೊಂದಿರುವ ಕಂಪನಿ (ಎನ್ಒಎಫ್ಎಚ್ಸಿ) ಸಂರಚನೆಗೆ ಐದು ವರ್ಷಗಳಲ್ಲಿ ಪರಿವರ್ತನೆಯಾಗಬೇಕು. ಒಮ್ಮೆ ಎನ್ಒಎಫ್ಎಚ್ಸಿ ಹೊಂದಿದರೆ ತೆರಿಗೆಯ ಸಹಜ ಸ್ಥಿತಿಗೆ ತಲುಪುತ್ತವೆ. | ಪಿ.ಕೆ.ಮೊಹಂತಿ ಆರ್ಬಿಐನ ಐಡಬ್ಲ್ಯುಜಿ ಮುಖ್ಯಸ್ಥ