ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ 'ಆ್ಯಂಟಿ ಕಮ್ಯೂನಲ್ ಟಾಸ್ಕ್​ ಫೋರ್ಸ್​' ರಚನೆ! ದ.ಕನ್ನಡ, ಉಡುಪಿಗೆ ಸೀಮಿತ | Dakshina Kannada

ವಿಜಯವಾಣಿ - 2025-05-03T134645.429
Published on

Dakshina Kannada: ಪ್ರವೀಣ್ ನೆಟ್ಟಾರು ಹತ್ಯೆ ನಂತರ ಮತ್ತೆ ಮಂಗಳೂರಿನಲ್ಲಿ ನೆತ್ತರು ಹರಿದಿದ್ದು, ಹಿಂದೂಪರ ಕಾರ್ಯಕರ್ತ ಸುಹಾಸ್​ ಶೆಟ್ಟಿಯನ್ನು ಕಿಡಿಗೇಡಿಗಳ ಗ್ಯಾಂಗ್​ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದಿದೆ. ಮಂಗಳೂರಿನ ಬಜ್ಪೆ ಕಿನ್ನಿಪದವು ಸಮೀಪ ಸುಹಾಸ್ ಶೆಟ್ಟಿ ಮೇಲೆ ಏಕಾಏಕಿ ದಾಳಿ ನಡೆಸಿ, ಮಚ್ಚಿನಿಂದ ಕೊಲೆ ಮಾಡಲಾಗಿದೆ. ಈ ಘಟನೆ ಸಂಭವಿಸಿದ ಬೆನ್ನಲ್ಲೇ ದಕ್ಷಿಣ ಕನ್ನಡದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬಿಗಿ ಬಂದೋಬಸ್ತ್​ ಮಾಡಲಾಗಿದೆ.

ಸುಹಾಸ್​ ಶೆಟ್ಟಿ ಹತ್ಯೆಯಿಂದ ದಕ್ಷಿಣ ಕನ್ನಡದಲ್ಲಿ ಕುದಿಯುತ್ತಿದ್ದು, ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಈ ಘಟನೆ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹಸಚಿವ ಜಿ. ಪರಮೇಶ್ವರ್​, "ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನು ಮುಂದೆ ಇಂತಹ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ, ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಆ್ಯಂಟಿ ಕಮ್ಯೂನಲ್ ಟಾಸ್ಕ್​ ಫೋರ್ಸ್​ ರಚನೆ ಮಾಡುತ್ತಿದ್ದೇವೆ" ಎಂದರು.

"ಎರಡೂ ಜಿಲ್ಲೆಗಳಲ್ಲಿ ಕೋಮು ವಿರೋಧಿ ಕಾರ್ಯಪಡೆಯನ್ನು ರಚಿಸುತ್ತಿದ್ದೇವೆ. ವಿಶೇಷವಾಗಿ ಎರಡೂ ಜಿಲ್ಲೆಯಲ್ಲಿಯೂ ಈ ಫೋರ್ಸ್​ ಕಾರ್ಯನಿರ್ವಹಿಸಲಿದೆ. ಯಾರು ಇಂತಹ ಕೋಮುವಾದವನ್ನು ಬೆಂಬಲಿಸಿ, ಉತ್ತೇಜನ ನೀಡುತ್ತಾರೋ ಅಂಥವರ ವಿರುದ್ಧ ಅತ್ಯಂತ ಕಠಿಣ ಕ್ರಮ ಜರುಗಿಸಲಾಗುವುದು" ಎಂದು ಎಚ್ಚರಿಕೆ ನೀಡಿದರು.

8 ಆರೋಪಿಗಳು ಅರೆಸ್ಟ್

ಸುಹಾಸ್ ಶೆಟ್ಟಿ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಒಟ್ಟು 8 ಆರೋಪಿಗಳನ್ನು ಬಂಧಿಸಿದ್ದಾರೆ. 5 ತಂಡಗಳನ್ನು ರಚಿಸಿ ಆರೋಪಿಗಳ ಸೆರೆಗೆ ಬಲೆ ಬೀಸಿದ್ದ ಖಾಕಿ ಪಡೆ, 8 ಶಂಕಿತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರನ್ನು ಅಬ್ದುಲ್ ಸಫ್ವಾನ್ (ಪ್ರಮುಖ ಆರೋಪಿ), ನಿಯಾಜ್, ಎಂಡಿ ಮುಜಾಮಿಲ್, ಕಲಂದರ್ ಶಫಿ, ಆದಿಲ್ ಮೆಹರೂಫ್, ನಾಗರಾಜ್, ಎಂಡಿ ರಿಜ್ವಾನ್ ಹಾಗೂ ರಂಜಿತ್ ಎಂದು ಗುರುತಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net