ಹಳೆ ದಾಖಲೆ ಕೆದಕಲು 30 ಶಾಸಕರಿಗೆ ಕೈ ಟಾಸ್ಕ್; ಮುಡಾ, ವಾಲ್ಮೀಕಿ ಆರೋಪಕ್ಕೆ ಪ್ರತ್ಯಾಸ್ತ್ರ

Congress
Published on

ಬೆಂಗಳೂರು: ಮುಡಾ ನಿವೇಶನ ಹಗರಣ ಹಾಗೂ ವಾಲ್ಮೀಕಿ ನಿಗಮದ ಅವ್ಯವಹಾರ ಪ್ರಕರಣ ಕಾಂಗ್ರೆಸ್​ಗೆ ರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ತಂದಿರುವ ಬೆನ್ನಲ್ಲೇ, ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತ್ಯಸ್ತ್ರ ಹೂಡಲು ಮುಂದಾಗಿದೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ಬಿಜೆಪಿಯ ಪ್ರಮುಖ ನಾಯಕರ ವಿರುದ್ಧ ಕೇಳಿಬಂದಿದ್ದ ಆರೋಪಗಳನ್ನು ರ್ತಾಕ ಅಂತ್ಯ ಕಾಣಿಸುವ ಪ್ರಕ್ರಿಯೆಗೆ ವೇಗ ನೀಡಿದೆ. ಗೃಹ ಸಚಿವ ಜಿ.ಪರಮೇಶ್ವರ್ ನೇತೃತ್ವದ ಸಮಿತಿ ಸಭೆಗಳನ್ನು ನಡೆಸಿ ತನಿಖೆಯ ಪ್ರಗತಿ ಪರಿಶೀಲಿಸಿ ಹೈಕಮಾಂಡ್ ಗಮನಕ್ಕೂ ತರುತ್ತಿದೆ. ಇಷ್ಟರ ನಡುವೆ ಇನ್ನೊಂದು ಹಂತದ ದಾಖಲೆ ಕೆದಕಲು ಕಾಂಗ್ರೆಸ್ ನಿರ್ಧರಿಸಿದೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದವರಲ್ಲದೇ ಶಾಸಕರ ಮೇಲೆ ಯಾವುದೇ ಪ್ರಕರಣ ಅಥವಾ ಆರೋಪಗಳಿದ್ದರೆ ಅದನ್ನು ಪಕ್ಷದ ಗಮನಕ್ಕೆ ತರಲು ಮತ್ತು ಅಗತ್ಯ ದಾಖಲೆ ಕಲೆಹಾಕಲು 30 ಶಾಸಕರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಅದರಲ್ಲೂ ಮುಖ್ಯವಾಗಿ ಭೂಮಿ ಒತ್ತುವರಿಗೆ ಸಂಬಂಧಿಸಿದ ಪ್ರಕರಣಗಳಿದ್ದರೆ ಆದ್ಯತೆ ಮೇಲೆ ಗಮನಹರಿಸುವಂತೆ ಸೂಚನೆ ಕಳಿಸಲಾಗಿದೆ.

ಮುಂದೇನು?: ಅಕ್ಟೋಬರ್ ಕೊನೆ ವಾರದೊಳಗೆ ಮಾಹಿತಿ ಸಂಗ್ರಹವಾದರೆ ಅದನ್ನು ಮಾಧ್ಯಮಗಳ ಮೂಲಕ ಜನರ ಮುಂದೆ ಚರ್ಚೆಗಿಡುವುದು, ಕಾನೂನು ಹೋರಾಟ ಮಾಡುವುದು ಮತ್ತು ಸ್ಥಳೀಯವಾಗಿ ಬೀದಿಗಿಳಿದು ಹೋರಾಟ ಮಾಡುವ ಚರ್ಚೆ ಪಕ್ಷದಲ್ಲಿ ನಡೆದಿದೆ. ಅದಕ್ಕಿನ್ನೂ ಸ್ಪಷ್ಟ ರೂಪ ಸಿಕ್ಕಿಲ್ಲ. ಈಗಾಗಲೇ ಬಿಜೆಪಿ ನಾಯಕರ ದಾಖಲೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುವ ಕಾರ್ಯ ನಡೆದಿದೆ. ಇತ್ತೀಚೆಗೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರಿಗೆ ಸಂಬಂಧಿಸಿದ, ಕೋರ್ಟ್​ನಲ್ಲಿ ಇತ್ಯರ್ಥಗೊಂಡಿರುವ 12 ವರ್ಷ ಹಳೆಯ ವ್ಯಾಜ್ಯದ ದಾಖಲೆ ಬಹಿರಂಗಪಡಿಸಿ ಬಿಜೆಪಿಯನ್ನು ಮುಜುಗರಕ್ಕೀಡು ಮಾಡುವ ಕಾರ್ಯ ನಡೆದಿತ್ತು. ಅದಾದ ಬಳಿಕ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಚುನಾವಣೆ ಅಫಿಡೆವಿಟ್​ನಲ್ಲಿ ನೀಡಿದ ಮಾಹಿತಿಯನ್ನೇ ಮುಂದಿಟ್ಟುಕೊಂಡು ಅವರಿಗೆ ಪ್ರಶ್ನೆ ಕೇಳಿ ರಾಜಕೀಯ ಎದಿರೇಟು ನೀಡುವ ಕೆಲವಾಗಿತ್ತು. ಈ ಕಾರ್ಯಕ್ಕೆ ಸಿದ್ದರಾಮಯ್ಯ ಸಂಪುಟದ ಪ್ರಮುಖ ಸಚಿವರನ್ನೇ ಕಾಂಗ್ರೆಸ್ ಮುಂದೆಬಿಟ್ಟಿತ್ತು. ಸಚಿವರನ್ನೇ ಮುಂದೆ ಬಿಡುವ ಮೂಲಕ ಗಂಭೀರತೆ ತರುವುದು ಉದ್ದೇಶ. ಮುಂದಿನ ಹಂತದಲ್ಲಿ ಬಿಜೆಪಿಯ ಇತರ ನಾಯಕರಿಗೆ ಸಂಬಂಧಿಸಿದ ದಾಖಲೆಯನ್ನು ಬಹಿರಂಗಪಡಿಸಿ ಬಿಸಿಮುಟ್ಟಿಸುವ ಗುರಿ ಇದೆ ಎಂದು ಪಕ್ಷದ ಹಿರಿಯ ನಾಯಕರು ವಿವರಿಸಿದ್ದಾರೆ.

ನಷ್ಟ ಭರ್ತಿ ಯತ್ನ: ಬಿಜೆಪಿ ನಾಯಕರಿಗೆ ಸಂಬಂಧಿಸಿದ ದಾಖಲೆಯನ್ನು ಕೆದಕುವ ಮೂಲಕ ನಷ್ಟ ಭರ್ತಿ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಕೆಪಿಸಿಸಿ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಡಾ ಹಾಗೂ ವಾಲ್ಮೀಕಿ ನಿಗಮದ ಹಗರಣದಿಂದ ಪಕ್ಷದ ಇಮೇಜ್​ಗೆ ಸಾಕಷ್ಟು ಧಕ್ಕೆಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ನಷ್ಟ ಭರ್ತಿ ಮಾಡಿಕೊಳ್ಳಬೇಕೆಂದರೆ ಸರ್ಕಾರಕ್ಕೆ ಎರಡು ಅವಕಾಶ ಇರಲಿದೆ. ಜನರಿಗೆ ಖುಷಿ ಕೊಡುವ ಆಡಳಿತ ನೀಡುವುದು, ಎದುರಾಳಿಯ ಬಣ್ಣ ಬಯಲು ಮಾಡಿ ಅವರನ್ನು ದುರ್ಬಲಗೊಳಿಸುವುದು ಎಂದು ಅವರು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net