ಚೀನಾ ಸರಕಿಗೆ ಸುಂಕ ಹೆಚ್ಚಳ?

China Good
Published on

ನವದೆಹಲಿ: ಚೀನಾದಿಂದ ಆಮದಾಗುವ ಅಪಾರ ಪ್ರಮಾಣದ ಸರಕಿಗೆ ನಿರ್ಬಂಧ ವಿಧಿಸುವ ಕ್ರಮದ ಭಾಗವಾಗಿ ಲ್ಯಾಪ್​ಟಾಪ್, ಕ್ಯಾಮೆರಾ, ಜವಳಿ ಮತ್ತು ಅಲ್ಯೂಮಿನಿಯಂ ಸರಕುಗಳು ಸೇರಿದಂತೆ ಸುಮಾರು 20 ಉತ್ಪನ್ನ ಮೇಲೆ ಅಬಕಾರಿ ಸುಂಕ ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ. ಸದ್ಯ ಹಣಕಾಸು ಸಚಿವಾಲಯ ಈ ಕುರಿತ ಪ್ರಸ್ತಾವನೆಯನ್ನು ಸಿದ್ಧ ಪಡಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಡಿದ್ದ ಪ್ರಸ್ತಾಪವನ್ನು ಸರ್ಕಾರ ತಿರಸ್ಕರಿಸಿತ್ತು.

ಇದು ಕೇವಲ ಚೀನಾದ ವಿರುದ್ಧದ ನಿರ್ದಿಷ್ಟ ಕ್ರಮವಲ್ಲ, ಕಸ್ಟಮ್್ಸ ಸುಂಕದ ಒಟ್ಟಾರೆ ಹೆಚ್ಚಳ. ಇದು ಇನ್ನಿತರ ದೇಶಗಳ ಸರಕಿಗೂ ಅನ್ವಯವಾಗಲಿದೆ, ಆದರೆ ಚೀನಾದಿಂದ ಹೆಚ್ಚಿನ ಪ್ರಮಾಣದಲ್ಲಿ ಬರುವ ಉತ್ಪನ್ನಗಳ ಮೇಲೆ ಕೇಂದ್ರಿಕರಿಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಆದಾಗ್ಯೂ ಭಾರತವು ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವ ದೇಶಗಳಿಂದ, ಅದರಲ್ಲೂ ವಿಶೇಷವಾಗಿ ವಿಯೆಟ್ನಾಂ, ಥಾಯ್ಲೆಂಡ್​ನಂತಹ ರಾಷ್ಟ್ರಗಳಿಂದ ಆಮದನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಕಸ್ಟಮ್್ಸ ಸುಂಕ್ ಹೆಚ್ಚಳದ ಬಗ್ಗೆ ಎಚ್ಚರ ವಹಿಸಿದೆ ಎನ್ನಲಾಗಿದೆ. ಉಕ್ಕಿನ ಕೆಲ ಉತ್ಪನ್ನಗಳ ಮೇಲೆ ಆಮದು ನಿರ್ಬಂಧ ವಿಧಿಸಲು ಪರಿಗಣಿಸಲಾಗುತ್ತಿದೆ ಎಂದು ವಿದೇಶಿ ವಹಿವಾಟಿನ ಮಹಾನಿರ್ದೇಶನಾಲಯ ಹೇಳಿದೆ. ಕೇಂದ್ರ ಸರ್ಕಾರ ಈಗಾಗಲೇ ಚೀನಾ ಮೂಲದ ಸಂಸ್ಥೆಗಳಿಂದ ವಿದೇಶಿ ನೇರ ಹೂಡಿಕೆಗೆ (ಎಫ್​ಡಿಐ) ಸ್ವಯಂಚಾಲಿತದ ಬದಲಾಗಿ ಅನುಮತಿ ಕಡ್ಡಾಯ ಮಾಡಿದೆ. ಇಷ್ಟೇ ಅಲ್ಲದೇ ಮೊದಲ ಸುಮಾರು 100ಕ್ಕೂ ಹೆಚ್ಚು ಚೀನಾದ ಆಪ್​ಗಳನ್ನು ನಿರ್ಬಂಧಿಸಿದೆ. ಪೂರ್ವ ಲಡಾಖ್​ನಲ್ಲಿನ ಉದ್ವಿಗ್ನತೆಯ ನಂತರ ಈ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ.

ಗಲ್ವಾನ್ ಅತಿಕ್ರಮಣ ಪೂರ್ವ ಯೋಜಿತ

ಪೂರ್ವ ಲಡಾಖ್​ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಗಡಿ ಪಡೆಗಳ ನಡುವೆ ಜೂನ್​ನಲ್ಲಿ ನಡೆದ ಹಿಂಸಾತ್ಮಕ ಮುಖಾಮುಖಿ ಒಂದು ಅಚಾನಕ್ಕಾದ ಘಟನೆಯಲ್ಲ. ಚೀನಾ ಅದನ್ನು ಮೊದಲೇ ಯೋಜಿಸಿತ್ತು ಎಂಬ ಅಂಶ ಈಗ ಬಯಲಾಗಿದೆ. ಪ್ಯಾಂಗೊಂಗ್ ತ್ಸೊ ಸರೋವರದ ಫಿಂಗರ್-4ರಿಂದ ಗಲ್ವಾನ್ ಹಾಗೂ ಹಾಟ್ ಸ್ಪ್ರಿಂಗ್ ಪ್ರದೇಶಗಳವರೆಗೆ ನುಸುಳಲು ಚೀನಾ ಸೇನೆ ಭಾರಿ ತಯಾರಿ ನಡೆಸಿತ್ತು ಎಂದು ಅಮೆರಿಕದ ಬೇಹುಗಾರಿಕೆ ಸಂಸ್ಥೆಗಳು ಹಾಗೂ ಭಾರತದ ಭದ್ರತಾ ಸಂಸ್ಥೆಗಳ ಪ್ರತ್ಯೇಕ ವರದಿಗಳು ಸ್ಪಷ್ಟಪಡಿಸಿವೆ. ಚೀನಾ ಕೆಲವು ಭಾಗಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಶಸ್ತ್ರಾಸ್ತ್ರಗಳನ್ನು ನಿಯೋಜಿಸಿರುವುದು ಕೂಡ ಗೊತ್ತಾಗಿದೆ. ಟಿಬೆಟ್​ನಲ್ಲಿ ಆಧುನಿಕ ಟ್ಯಾಂಕ್​ಗಳನ್ನು ಚೀನಾ ನೆಲೆಗೊಳಿಸಿದ್ದ ವಿಷಯ ಕಳೆದ ವರ್ಷವೇ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದ್ದವು. ಆದರೆ ವಾಸ್ತವ ನಿಯಂತ್ರಣ ರೇಖೆ (ಎಲ್​ಎಸಿ) ಸಮೀಪದ ಭಾರತೀಯ ಪ್ರದೇಶಗಳಲ್ಲಿ ನುಸುಳಲು ಆರಂಭವಾದಾಗಲೇ ಅದರ ನಿಜವಾದ ಉದ್ದೇಶ ಗೊತ್ತಾಗಿದ್ದುದು ಎಂದು ಅಮೆರಿಕದ ಬೇಹುಗಾರಿಕಾ ವರದಿ ತಿಳಿಸಿದೆ. ಚೀನಾ ಟಿ-15 ಟ್ಯಾಂಕ್​ಗೆ ಪ್ರತಿಯಾಗಿ ಭಾರತ ಅತ್ಯಾಧುನಿಕ ಟಿ-90 ಟ್ಯಾಂಕ್​ಗಳನ್ನು ನಿಯೋಜಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net