ಜನರ ಗಮನ ಬೇರೆಡೆ ಸೆಳೆಯಲು ಪ್ರತಿಪಕ್ಷ ನಾಯಕರ ಮೇಲೆ ಗುರಿ: ವಿಜಯೇಂದ್ರ ಆಕ್ರೋಶ

b Y v
Published on

ಬೆಂಗಳೂರು: ಪ್ರತಿಪಕ್ಷದ ನಾಯಕರನ್ನೇ ಕಾಂಗ್ರೆಸ್ ಸರ್ಕಾರ ಗುರಿ ಮಾಡಿದೆ. ಸಿಎಂ ಸಿದ್ದರಾಮಯ್ಯ ಅಭದ್ರತೆಗೆ ಸಿಲುಕಿ ಸಹನೆ ಕಳೆದುಕೊಂಡಿದ್ದಾರೆ. ಡಿನೋಟಿಫಿಕೇಷನ್ ಪ್ರಕರಣ ಹೊಸದಲ್ಲ. ಮೂವರು ಸಚಿವರು ಹೇಳಿದ ವಿಷಯ ಸದ್ಯಕ್ಕೆ ಕೋರ್ಟ್ ನಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣದ ವಿಚಾರದಲ್ಲಿ ಹಿಂದೆಯೂ ಐದು ಜನ ಸಚಿವರು ಜಂಟಿ ಸುದ್ದಿಗೋಷ್ಠಿ ಮಾಡಿದ್ದರು. ನಂತರ ಏನಾಯಿತು ಎಂದು ರಾಜ್ಯದ ಜನರಿಗೆ ಗೊತ್ತಿದೆ. ಪ್ರತಿಪಕ್ಷಗಳ ಮೇಲೆ ಇನ್ನೂ ಬ್ರಹ್ಮಾಸ್ತ್ರ ಬಿಡುತ್ತಾರೋ ಕಾದು ನೋಡುತ್ತೇವೆ ಎಂದು ನಿಗೂಢವಾಗಿ ಹೇಳಿದರು.

ಭ್ರಷ್ಟಾಚಾರ ಮುಕ್ತ, ಜನಪರ ಆಡಳಿತ ಕೊಡುತ್ತೇವೆ ಎಂಬ ಭರವಸೆ ನೀಡಿ ಅಧಿಕಾರಕ್ಕೆ ಬಂದರು. ಕೇವಲ 15 ತಿಂಗಳಲ್ಲಿ ಭ್ರಷ್ಟಾಚಾರ ಸರಣಿ ರೂಪದಲ್ಲಿ ಹೊರಬರುತ್ತಿವೆ., ಅಭಿವೃದ್ಧಿ ಸ್ಥಗಿತ, ಕಾನೂನು ಮತ್ತು ಸುವ್ಯವಸ್ಥೆ ಕುಸಿತದ ಸ್ಥಿತಿಯಿಂದ ಜನರ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ ಸರ್ಕಾರ ತಂತ್ರ ಹೂಡಿ, ಪ್ರತಿಪಕ್ಷದವರ ಮೇಲೆ ಕೇಸ್ ದಾಖಲಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುನಿರತ್ನ ವಿರುದ್ಧ ಚಿತಾವಣೆ

ಲೋಕಸಭೆ ಚುನಾವಣೆಯಲ್ಲಾದ ಸೋಲಿನ ಪ್ರಭಾವ ಶಾಸಕ ಮುನಿರತ್ನ ವಿರುದ್ಧ ದಾಖಲಾದ ಪ್ರಕರಣಗಳಲ್ಲಿ ಎದ್ದು ಕಾಣುತ್ತಿದೆ. ಜಾತಿ ನಿಂದನೆ, ಬೆದರಿಕೆ ಕುರಿತು ಆಡಿಯೋದ ಬಗ್ಗೆ ಎಫ್ ಎಸ್ ಎಲ್ ವರದಿ ಬರುವ ತನಕ ಏನನ್ನೂ ಹೇಳಲು ಬಯಸುವುದಿಲ್ಲ.

ನಾಲ್ಕು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣ ಈಗ ಹೊರಗೆ ಬಂದಿದ್ಹೇಗೆ ?. ಡಿ.ಕೆ.ಸುರೇಶ್ ಅಧ್ಯಕ್ಷತೆಯಲ್ಲಿ ಸರ್ಕಾರ ಎಸ್ ಐಟಿ ರಚಿಸುವುದು ಸೂಕ್ತ ಎನಿಸುತ್ತದೆ. ಮುನಿರತ್ನ ಪರ, ವಿರೋಧ ಎನ್ನುವುದಲ್ಲ. ತನಿಖೆ ನಡೆಯುತ್ತಿದ್ದು, ನಿಷ್ಪಕ್ಷಪಾತವಾಗಿ ಆಗಬೇಕು ಎನ್ನುವುದಷ್ಟೇ ನಮ್ಮ ಒತ್ತಾಯ ಎಂದು ವಿಜಯೇಂದ್ರ ಹೇಳಿದರು.

ಕೋಟ್ಯಂತರ ಭಕ್ತರ ಆರಾಧ್ಯ ದೈವ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಪಡೆಯವ ಲಡ್ಡು ಪ್ರಸಾದ ಪವಿತ್ರವಾಗಿದೆ. ಇಂತಹ ಪ್ರಸಾದವನ್ನೇ ಕಲಬೆರಕೆ ಮಾಡಿರುವ ವರದಿ ಕಳವಳಕಾರಿಯಾಗಿದ್ದು, ಆಂಧ್ರಪ್ರದೇಶ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.

ಎನ್ ಐಎ ತನಿಖೆಗೆ ಆಗ್ರಹ

ನಾಗಮಂಗಲ ಗಲಭೆಗೆ ಸಂಬಂಧಿಸಿದಂತೆ ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ ನೇತೃತ್ವದ ಸತ್ಯ ಶೋಧನಾ ಸಮಿತಿ ವರದಿಯನ್ನು ವಿಜಯೇಂದ್ರ ಸ್ವೀಕರಿಸಿ, ಈ ಘಟನೆಯನ್ನು ಎನ್ ಐ ಎ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ, ನಾಗಮಂಗಲದಲ್ಲಿ ದೇಶ ದ್ರೋಹಿಗಳು ದುಷ್ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದರು.

ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ದಾವಣಗೆರೆಯಲ್ಲಿ ಕಲ್ಲು ತೂರಾಟವಾಗಿದೆ. ಈ ಘಟನಾವಳಿಗಳನ್ನು ಗಮನಿಸಿದರೆ, ಸರ್ಕಾರದ ನಿಷ್ಕ್ರಿಯತೆ, ತುಷ್ಟೀಕರಣವು ಅಲ್ಪಸಂಖ್ಯಾತ ದುಷ್ಕರ್ಮಿಗಳಿಗೆ ಸಲುಗೆ ಸಿಕ್ಕು, ಸುರಕ್ಷತೆ ಭಾವನೆಯಿಂದ ದುರುಳತನ ಮೆರೆಯುತ್ತಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net