ಸಚಿವರಿಗೆ 2 ಲಕ್ಷ ‘ವೋಟ್ ಚೋರಿ’ ಸಹಿ ಸಂಗ್ರಹ ಟಾರ್ಗೆಟ್

dkshivakumar
Published on

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಮತಗಳ್ಳತನ ಆರೋಪ ಸಂಬಂಧ ‘ವೋಟ್ ಚೋರ್ ಗದ್ದಿ ಚೋಡ್’ ಸಹಿ ಸಂಗ್ರಹ ಅಭಿಯಾನ ಕೈಗೊಂಡಿರುವ ಕಾಂಗ್ರೆಸ್ ಎಲ್ಲ ಸಚಿವರಿಗೆ ತಲಾ 2 ಲಕ್ಷ ಸಹಿ ಸಂಗ್ರಹಿಸುವಂತೆ ಗುರಿ ನಿಗದಿ ಮಾಡಿದೆ.

ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಹಿ ಸಂಗ್ರಹ ಸಂಬಂಧ ಎಲ್ಲ ಸಚಿವರಿಗೆ ಪತ್ರ ಬರೆದಿದ್ದಾರೆ. ಸಚಿವರು 2 ಲಕ್ಷ ಸಹಿ ಸಂಗ್ರಹ ಮಾಡಿ ಅಕ್ಟೋಬರ್ 24ರ ಒಳಗೆ ಕೆಪಿಸಿಸಿ ಕಚೇರಿಗೆ ತಲುಪಿಸಬೇಕೆಂದು ತಿಳಿಸಿದ್ದಾರೆ.

ಎಐಸಿಸಿ ಪ್ರದಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ, ರಾಜ್ಯದಿಂದ ಅತೀ ಹೆಚ್ಚು ಸಹಿ ಸಂಗ್ರಹ ಮಾಡಬೇಕೆಂದು ಟಾರ್ಗೆಟ್ ನೀಡಿದ್ದಾರೆ. ಈ ಮೇರೆಗೆ ಸಚಿವರು ಕ್ಷೇತ್ರ ಮತ್ತು ಜಿಲ್ಲೆಯಲ್ಲಿ ಸಹಿ ಸಂಗ್ರಹ ಮಾಡಬೇಕು. ಈಗಾಗಲೇ ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ತಾಲೂಕು ಕಾಂಗ್ರೆಸ್ ಸಮಿತಿ ಪ್ರತ್ಯೇಕವಾಗಿ ಸಹಿ ಸಂಗ್ರಹ ಮಾಡುತ್ತಿವೆ. ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಪ್ರತಿನಿತ್ಯ ಸಂಗ್ರಹವಾದ ಸಹಿಗಳ ಸಂಖ್ಯೆಗಳ ವರದಿಯನ್ನು ಪಡೆಯುತ್ತಿದ್ದಾರೆ. ಆದರಿಂದ ಆಯಾಯ ದಿನದ ವಿವರವನ್ನು ಕೆಪಿಸಿಸಿ ಕಚೇರಿಗೆ ತಲುಪಿಸಬೇಕೆಂದು ಡಿ.ಕೆ. ಶಿವಕುಮಾರ್ ಸಚಿವರಿಗೆ ಹೇಳಿದ್ದಾರೆ.

ಇದಲ್ಲದೆ, ಈಗಾಗಲೇ ಶಾಸಕರಿಗೆ ತಲಾ 1 ಲಕ್ಷ ಸಹಿ ಸಂಗ್ರಹ ಮತ್ತು ವಿಧಾನ ಪರಿಷತ್ ಸದಸ್ಯರಿಗೆ ತಲಾ 50 ಸಾವಿರ ಸಹಿ ಸಂಗ್ರಹದ ಟಾರ್ಗೆಟ್ ನೀಡಲಾಗಿದೆ. ಈಗಾಗಲೇ ಎಲ್ಲೆಡೆ ಆರಂಭವಾಗಿದ್ದು, ದೊಡ್ಡ ಪ್ರಮಾಣದಲ್ಲಿ ಸಹಿ ಸಂಗ್ರಹ ಮಾಡುವ ಮೂಲಕ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹೋರಾಟಕ್ಕೆ ಬೆನ್ನಲುಬಾಗಿ ನಿಲ್ಲಬೇಕೆಂಬುದು ಕಾಂಗ್ರೆಸ್ ತಂತ್ರವಾಗಿದೆ.

ಮನೆಮನ ತಲುಪಿ

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ವೋಟ್ ಚೋರ್ ಗದ್ದಿ ಚೋಡ್ ಸಹಿ ಸಂಗ್ರಹ ಅಭಿಯಾನಕ್ಕೆ ವಿಧಾನ ಪರಿಷತ್ ಸರ್ಕಾರ ಮುಖ್ಯ ಸಚೇತಕ ಸಲೀಂ ಅಹ್ಮದ್, ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಸಲೀಂ ಅಹ್ಮದ್, ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆ ಚುನಾವಣೆಯ ಗೆಲುವಿಗೆ ಸಿದ್ಧರಾಗಿ. ಈ ನಿಟ್ಟಿನಲ್ಲಿ ಸಹಿ ಸಮಗ್ರ ಅಭಿಯಾನ ಮುಂದಿಟ್ಟುಕೊಂಡು ಮನೆ ಮನೆಗೆ ತಲುಪಿ ಜಾಗೃತಿ ಮೂಡಿಸಬೇಕಂದು ಕಾರ್ಯಕರ್ತರಿಗೆ ಕರೆ ನೀಡಿದರು. ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಿ ಮತದಾರರ ಸೆಳೆಯುವ ಕೆಲಸ ಮಾಡಬೇಕು. ಇದರಿಂದ ಪಾಲಿಕೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದು ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ವಶಕ್ಕೆ ಪಡೆಯುವಂತೆ ಶ್ರಮಿಸಬೇಕೆಂದು ಕರೆ ನೀಡಿದರು. ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಕೇಶವಮೂರ್ತಿ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net