ಮೈಸೂರಿನ ಶ್ರೀಕೃಷ್ಣಧಾಮದಲ್ಲಿ ತಪ್ತ ಮುದ್ರಾಧಾರಣೆ

Tapta Mudradharana at Sri Krishnadham Mysore
Published on

ಮೈಸೂರು: ಅಷಾಢ ಮಾಸದ ಪ್ರಥಮ ಏಕಾದಶಿ ಪರ್ವಕಾಲ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಮಿತ್ರ ಮಂಡಳಿ ಹಾಗೂ ಶ್ರೀಕೃಷ್ಣ ಟ್ರಸ್ಟ್ ವತಿಯಿಂದ ಬುಧವಾರ ಸರಸ್ವತಿಪುರಂನ ಶ್ರೀಕೃಷ್ಣಧಾಮದಲ್ಲಿ ತಪ್ತ ಮುದ್ರಾಧಾರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಉಡುಪಿಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳ, ಕಿರಿಯ ಶ್ರೀ ವಿದ್ಯಾರಾಜೇಶ್ವರ ಪಾದಂಗಳ ಅವರು ಭಕ್ತರಿಗೆ ಶಂಖಚಕ್ರಗಳ ತಪ್ತ ಮುದ್ರಾಧಾರಣೆ ನೆರವೇರಿಸಿದರು. ಸಹಸ್ರಾರು ಭಕ್ತರಿಗೆ ಮುದ್ರಾಧಾರಣೆ ಮಾಡಿ ಮಾತನಾಡಿದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳ, ಆಷಾಢಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಶಯನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನದಿಂದ ಉತ್ಥಾನದ್ವಾದಶಿಯ ತನಕ ಶ್ರೀಮನ್ನಾರಯಣನು ಯೋಗನಿದ್ರೆಯಲ್ಲಿ ತೊಡಗುತ್ತಾನೆ ಅನ್ನುವ ನಂಬಿಕೆ ಇದೆ. ಮಳೆಗಾಲದಲ್ಲಿ ಸೊಳ್ಳೆ, ಕ್ರಿಮಿ ಕೀಟಗಳಿಂದ ಎದುರಾಗುವ ರೋಗ ರುಜಿನಗಳನ್ನು ಎದುರಿಸಲು ಬೇಕಾದ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೂ ತಪ್ತ ಮುದ್ರಾಧಾರಣೆ ಪೂರಕವಾಗಲಿದೆ ಎಂದರು.

ಚಾತುರ್ಮಾಸ್ಯ ಕೂರುವ ಮೊದಲು ಗೃಹಸ್ಥರು ಹಾಗೂ ಯತಿಗಳು ತಪ್ತ ಮುದ್ರಾಧಾರಣೆ ಮಾಡಿಸಿಕೊಳ್ಳಬೇಕು. ಅನಾನುಕೂಲವಾ ದವರು ಏಕಾದಶಿ ದಿನದ ಹೊರತಾಗಿಯೂ ಮುದ್ರಾ ಧಾರಣೆ ಮಾಡಿಸಿಕೊಳ್ಳಬಹುದು ಎಂದು ಹೇಳಿದರು

ಶ್ರೀಕೃಷ್ಣ ಟ್ರಸ್ಟ್ ಉಪಾಧ್ಯಕ್ಷ ರವಿಶಾಸ್ತ್ರಿ ಮಾತನಾಡಿ, ಪ್ರತಿವರ್ಷವೂ ನಾನಾ ಕಡೆಗಳಿಂದ ಭಕ್ತರು ಆಗಮಿಸಿ ತಪ್ತ ಮುದ್ರೆ ಹಾಕಿಸಿಕೊಳ್ಳುತ್ತಾರೆ. ಸುದರ್ಶನ ಹೋಮ ನಡೆಸಿ ಅದರಲ್ಲಿ ಕಾಯಿಸಿದ ಶಂಖ, ಚಕ್ರ, ಗದ, ಪದ್ಮ ಚಿಹ್ನೆಯನ್ನು ಎದೆಯ ಭಾಗ, ಎಡ ಮತ್ತು ಬಲ ತೋಳಿಗೆ ಹಾಕುವುದೇ ತಪ್ತ ಮುದ್ರಾಧಾರಣೆ ಎಂದು ಹೇಳಿದರು

ಶ್ರೀಕೃಷ್ಣ ಧಾಮದಲ್ಲಿ ಸುರೇಶ್ ಭಟ್ ಹಾಗೂ ಶ್ರೀಕಾಂತ್ ಆಚಾರ್ಯ ನೇತೃತ್ವದಲ್ಲಿ ಸುದರ್ಶನ ಹೋಮ ನೆರೆವೇರಿತು. ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಟ್ರಸ್ಟ್ ಉಪಾಧ್ಯಕ್ಷರಾದ ರವಿಶಾಸ್ತ್ರಿ, ಪಿ.ಎಸ್. ಶೇಖರ್, ಕಾರ್ಯದರ್ಶಿ ಕೆ.ವಿ.ಶ್ರೀಧರ್, ಶ್ರೀಕೃಷ್ಣ ಮಿತ್ರ ಮಂಡಳಿ ಅಧ್ಯಕ್ಷ ಪಿ.ಜಿ.ಪ್ರವೀಣ್, ಉಪಾಧ್ಯಕ್ಷ ಗೋಪಾಲಕೃಷ್ಣನ್, ವಿಜಯ ವಿಠಲ ವಿದ್ಯಾಸಂಸ್ಥೆಯ ಮುಖ್ಯಸ್ಥ ವಾಸುದೇವ ಭಟ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net