ಒತ್ತುವರಿ ತೆರವಿಗೆ ಬಂದಿದ್ದ ತಾಪಂ ಇಒಗೆ ತರಾಟೆ

14.Pyp. 02..
ಪಿರಿಯಾಪಟ್ಟಣ ತಾಲೂಕಿನ ಕೋಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನೂರು ಗ್ರಾಮದಲ್ಲಿ ಒತ್ತುವರಿ ತೆರವಿಗೆ ಬಂದಿದ್ದ ತಾಲೂಕು ಪಂಚಾಯಿತಿ ಇಒ ಡಿ.ಬಿ.ಸುನೀಲ್‌ಕುಮಾರ್ ಅವರನ್ನು ದಲಿತ ಸಂಘಟನೆ ಮುಖಂಡರು ತರಾಟೆಗೆ ತೆಗೆದುಕೊಂಡರು. ಎಸ್.ರಾಮು, ಅಜಯ್‌ಕುಮಾರ್, ರವಿಕುಮಾರ್ ಇತರರು ಇದ್ದರು.
Published on

ಪಿರಿಯಾಪಟ್ಟಣ: ತಾಲೂಕಿನ ಕೋಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನೂರು ಗ್ರಾಮದಲ್ಲಿ ಸೋಮವಾರ ಒತ್ತುವರಿ ತೆರವಿಗೆ ಆಗಮಿಸಿದ್ದ ತಾಲೂಕು ಪಂಚಾಯಿತಿ ಇಒ ಡಿ.ಬಿ.ಸುನೀಲ್ ಕುಮಾರ್ ಅವರಿಗೆ ದಲಿತ ಸಂಘಟನೆ ಮುಖಂಡರು ತರಾಟೆಗೆ ತೆಗೆದುಕೊಂಡರು.

ಗ್ರಾಮದ ಜ್ಯೋತಿ ಎಂಬುವರು ಸರ್ವೇ ನಂಬರ್ 16/10 ರಲ್ಲಿ ವಾಸಕ್ಕಾಗಿ ಮನೆ ನಿರ್ಮಿಸಿಕೊಂಡಿದ್ದು ಈ ಜಾಗಕ್ಕೆ ಪಂಚಾಯಿತಿ ವತಿಯಿಂದ ಈ-ಸ್ವತ್ತು ಕೂಡ ಮಾಡಿಕೊಡಲಾಗಿದೆ. ಸ್ವತ್ತಿನ ಚೆಕ್ಕುಬಂದಿ ಪಹಣಿಯ ಸರ್ವೇ ನಂಬರ್‌ನಲ್ಲಿ ರಸ್ತೆಯನ್ನು ಕೂಡ ತೋರಿಸಿಲ್ಲ. ಆದರೂ ಕಂದಾಯ ಇಲಾಖೆ ಮತ್ತು ಪಂಚಾಯಿತಿ ಇಲಾಖೆ ವಿನಾ ಕಾರಣ ದಲಿತ ವ್ಯಕ್ತಿ ನಿರ್ಮಿಸಿರುವ ಮನೆಯನ್ನು ತೆರವುಗೊಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆ ಮುಖಂಡರು ತೆರವು ಕಾರ್ಯವನ್ನು ತಡೆದು ಪ್ರತಿಭಟಿಸಿದರು.

ದಲಿತ ಮುಖಂಡ ಎಸ್.ರಾಮು ಮಾತನಾಡಿ, ತಾಲೂಕಿನಾದ್ಯಂತ ಸಾಕಷ್ಟು ಸರ್ಕಾರಿ ಜಾಗಗಳನ್ನು ಕೆಲವು ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಅನುಭೋಗದಲ್ಲಿದ್ದಾರೆ. ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು. ಆದರೆ ಯಾರದೋ ಒತ್ತಡಕ್ಕೆ ಮಣಿದು ದಲಿತ ವ್ಯಕ್ತಿ ವಾಸಕ್ಕಾಗಿ ನಿರ್ಮಿಸಿರುವ ಮನೆಯನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿರುವುದು ಖಂಡನೀಯ. ಈ ಒತ್ತುವರಿ ತೆರವಿಗೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಪಂ ಇಒ ಸುನೀಲ್‌ಕುಮಾರ್ ಪ್ರತಿಕ್ರಿಯೆ ನೀಡಿ, ತಾಲೂಕಿನಲ್ಲಿ ಈಗಾಗಲೇ ಸಾಕಷ್ಟು ಒತ್ತುವರಿ ತೆರವು ಕಾರ್ಯಗಳನ್ನು ಮಾಡಿ ಸರ್ಕಾರಿ ಜಾಗ ವಶಕ್ಕೆ ಪಡೆದಿದ್ದೇವೆ. ಒತ್ತುವರಿ ತೆರವಿನ ಬಗ್ಗೆ ಕಾರ್ಯನಿರ್ವಹಕಾಧಿಕಾರಿಗೆ ಸಂಪೂರ್ಣ ಜವಾಬ್ದಾರಿ ಇದೆ. ಸಾರ್ವಜನಿಕರು ಕರ್ತವ್ಯಕ್ಕೆ ಅಡ್ಡಿಪಡಿಸದೆ ಸಹಕರಿಸಬೇಕು ಎಂದರು.

ಅಂತಿಮವಾಗಿ ತಾಲೂಕಿನ ಇತರ ಒತ್ತುವರಿ ಜಾಗಗಳನ್ನು ತೆರವು ಮಾಡಿಸಲು ತಾಪಂ ಇಒ ನೀಡಿದ ಭರವಸೆ ಮೇರೆಗೆ ತೆರವು ಕಾರ್ಯಕ್ಕೆ ಸಹಕಾರ ನೀಡಿದರು. ಬೆಟ್ಟದಪುರ ಪೊಲೀಸ್ ಉಪ ನಿರೀಕ್ಷಕರಾದ ಅಜಯ್‌ಕುಮಾರ್, ರವಿಕುಮಾರ್, ಸ್ವಾಮಿ ಎಸ್.ರಾಮು ಶಿವಪ್ಪಚಾರ್, ಕುಮಾರ್, ಮುಖಂಡರಾದ ತಮ್ಮಣ್ಣಯ್ಯ, ಈರಾಜ್, ಶಿವರಾಜ್, ಜಗದೀಶ್, ಗಿರೀಶ್, ಪುಟ್ಟರಾಜು, ರಾಜಣ್ಣ, ಜಯಣ್ಣ, ಮಹದೇವ್, ರಾಜು ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net