ಬೆದರಿಕೆಯೊಡ್ಡಿ ಮಹಿಳೆಯನ್ನು ಆತ್ಮಹತ್ಯೆಗೆ ದೂಡಿದ ವ್ಯಕ್ತಿ ಪೊಲೀಸರ ವಶಕ್ಕೆ!

Untitled design (54)
Published on

ತಮಿಳುನಾಡು: ಮಹಿಳೆಯೊಬ್ಬರಿಗೆ ಹಲವು ದಿನಗಳಿಂದ ಬೆದರಿಕೆ ಹಾಕುತ್ತಿದ್ದ ವ್ಯಕ್ತಿ, ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದು, ಈ ಘಟನೆಯ ಬೆನ್ನಲ್ಲೇ ತಮಿಳುನಾಡು ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಸಂತ್ರಸ್ತೆಯ ಸಹೋದರಿ ಬ್ಲ್ಯಾಕ್‌ಮೇಲ್​ ಮಾಡುತ್ತಿದ್ದವನ ವಿರುದ್ಧ ಪುರಾವೆಗಳನ್ನು ಸಂಗ್ರಹಿಸಿ, ದೂರು ದಾಖಲಿಸಿದ ನಂತರ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ.

ಸಂತ್ರಸ್ತೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ವೃತ್ತಿಯಲ್ಲಿ ಚಾಲಕನಾಗಿದ್ದ ಸೆಲ್ವಂ ಆಕೆಯ ಜತೆ ಸ್ನೇಹ ಬೆಳೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸೆಲ್ವಂ ಮಹಿಳೆಯನ್ನು ತನ್ನೊಂದಿಗೆ ಹೊರಗೆ ಬರುವಂತೆ ಹಲವು ಬಾರಿ ಒತ್ತಾಯಿಸಿದ್ದಾನೆ. ಇದಕ್ಕೆ ನಿರಾಕರಿಸಿದ ಮಹಿಳೆಗೆ ತಮ್ಮಿಬ್ಬರ ವೀಡಿಯೊ ಚಾಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡುವುದಾಗಿ ಬ್ಲಾಕ್‌ಮೇಲ್ ಮಾಡಿದ್ದಾನೆ. ಈ ಒತ್ತಡವನ್ನು ತಾಳಲಾರದೆ ಸಂತ್ರಸ್ತೆ, ದೀಪಾವಳಿಯಂದು ಡೆತ್​ ನೋಟ್​ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆ ನಡೆದ ಬಳಿಕ ಸಂತ್ರಸ್ತೆಯ ಸಹೋದರಿ ಸೆಲ್ವಂನನ್ನು ಹಿಡಿಯಲು ನಿರ್ಧರಿಸಿ, ತನ್ನ ಸಹೋದರಿಯಂತೆ ನಟಿಸಿ ಆತನನ್ನು ಮಾತನಾಡಿಸಿದ್ದಾರೆ. ಆಗಲೂ ಕೂಡ ಅದೇ ಧ್ವನಿಯಲ್ಲಿ ಮಹಿಳೆಗೆ ಬೆದರಿಕೆ ಹಾಕಿದ ವ್ಯಕ್ತಿ, ಆಕೆಯನ್ನು ತಿರುಚ್ಚಿಗೆ ಬರುವಂತೆ ಹೇಳಿದ್ದಾನೆ. ಇಷ್ಟೆಲ್ಲಾ ನಡೆದ ನಂತರ ಮಹಿಳೆ ಸೆಲ್ವಂ ಜತೆಗಿನ ಸಂಭಾಷಣೆಯ ಆಡಿಯೋ ದಾಖಲೆಗಳನ್ನು ತಾಳಮುತ್ತು ನಗರ ಪೊಲೀಸರಿಗೆ ನೀಡಿ, ಆತನ ವಿರುದ್ಧ ದೂರು ದಾಖಲಿಸಿದ್ದಾರೆ.

ಸದ್ಯ ಮಹಿಳೆಯ ದೂರಿನ ಅನ್ವಯ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು, ಹೆಚ್ಚಿನ ವಿಚಾರಣೆಯನ್ನು ಕೈಗೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net