

ಕೊಯಮತ್ತೂರು: ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಶಾಲೆಯ ಶಿಕ್ಷಕ ಮಾತ್ರವಲ್ಲದೆ, ಆತನ ಪತ್ನಿಯನ್ನು ಸಹ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
ಆರೋಪಿ ಶಿಕ್ಷಕನ್ನು ಮಿಥುನ್ ಚಕ್ರವರ್ತಿ (35) ಎಂದು ಗುರುತಿಸಲಾಗಿದೆ. ಆತನ ಪತ್ನಿ ಅರ್ಚನಾಳನ್ನು ಸಹ (32) ಪೊಲೀಸರು ಬಂಧಿಸಿದ್ದಾರೆ. ಕೊಯಮತ್ತೂರಿನ ಆರ್ಎಸ್ ಪುರಂನಲ್ಲಿ ಖಾಸಗಿ ಪಿಯು ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಆರೋಪಿ ಮಿಥುನ್ ಚಕ್ರವರ್ತಿಯ ಲೈಂಗಿಕ ದೌರ್ಜನ್ಯ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ 2021ರ ನವೆಂಬರ್ 12ರಂದು ನಡೆದಿತ್ತು. ಈ ಪ್ರಕರಣದಲ್ಲಿ ಮೊದಲು ಮಿಥುನ್ ಬಂಧನವಾಗಿತ್ತು. ಇದೀಗ ಆಕೆಯ ಪತ್ನಿಯ ಬಂಧನವೂ ಆಗಿದೆ.
ಈ ಪ್ರಕರಣದಲ್ಲಿ ಕಾಲೇಜಿನ ಪ್ರಾಂಶುಪಾಲ ಸೇರಿದಂತೆ ಒಟ್ಟು ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಕೊಯಮತ್ತೂರಿನ ಪೊಕ್ಸೊ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿದೆ. ಮಿಥುನ್ ಪತ್ನಿ ಅರ್ಚನಾಳನ್ನು ನಿನ್ನೆ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಘಟನೆ ನಡೆದ ಸಂದರ್ಭದಲ್ಲಿ ಅರ್ಚನಾ ಸಹ ತನ್ನ ಗಂಡ ಮಿಥುನ್ ಶಿಕ್ಷಕನಾಗಿದ್ದ ಕಾಲೇಜಿನಲ್ಲೇ ಶಿಕ್ಷಕಿಯಾಗಿದ್ದಳು. ಮಿಥುನ್, ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿನಿ ಅರ್ಚನಾ ಬಳಿ ದೂರು ನೀಡಿದ್ದಳು. ಆದರೆ, ಇದನ್ನು ಗಂಭೀರವಾಗಿ ಪರಿಗಣಿಸದೇ ಅರ್ಚನಾ ನಿರ್ಲಕ್ಷಿಸಿದ್ದಳು. ಇದರ ಪರಿಣಾಮ ವಿದ್ಯಾರ್ಥಿನಿ ಕಿರುಕುಳ ತಾಳಲಾರದೇ ಕೊನೆಗೆ ತನ್ನ ಪ್ರಾಣವನ್ನೇ ಕಳೆದುಕೊಂಡಳು. (ಏಜೆನ್ಸೀಸ್)