

ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ(Annamalai) ಸವಾಲಿನ ಪ್ರತಿಜ್ಞೆಯನ್ನು ತೆಗೆದುಕೊಂಡಿದ್ದಾರೆ. 'ಭೀಷ್ಮ ಪ್ರತಿಜ್ಞೆ' ಸ್ವೀಕರಿಸಿದ ಅಣ್ಣಾಮಲೈ ಅವರು ಡಿಎಂಕೆಯನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೂ ಕಾಲಿಗೆ ಚಪ್ಪಲಿ ಅಥವಾ ಶೂ ಧರಿಸುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅಣ್ಣಾಮಲೈ ಕೊಯಂಬತ್ತೂರಿನಲ್ಲಿರುವ ತಮ್ಮ ಸ್ವಗೃಹದ ಮುಂದೆ ಆರು ಚಾಟಿ ಏಟುಗಳನ್ನು ಹೊಡೆದುಕೊಳ್ಳುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ನಿಮಗೆ ನಾಚಿಕೆ ಇಲ್ಲವೇ ಸ್ಟಾಲಿನ್?”, “ಆರೋಪಿ ಜ್ಞಾನಶೇಖರನ್ ಅವರನ್ನು ಗಲ್ಲಿಗೇರಿಸಿ” “#ShameOnYouStalin” ಎಂಬ ಘೋಷಣೆಗಳ ಫಲಕಗಳನ್ನು ಬಿಜೆಪಿ ಬೆಂಬಲಿಗರು ಹಿಡಿದುಕೊಂಡಿದ್ದರು.
ಇಂಜಿನಿಯರಿಂಗ್ ವಿದ್ಯಾರ್ಥಿಯ ವಿವರಗಳನ್ನು ಒಳಗೊಂಡ ಎಫ್‌ಐಆರ್ ಸೋರಿಕೆಗೆ ಸಂಬಂಧಿಸಿದಂತೆ ರಾಜ್ಯ ಪೊಲೀಸರ ಮೇಲೆ ವಾಗ್ದಾಳಿ ನಡೆಸಿದ ಅಣ್ಣಾಮಲೈ, ಸಂತ್ರಸ್ತೆಯನ್ನು ಹೆದರಿಸಲು ಎಫ್‌ಐಆರ್ ಬರೆಯಲಾಗಿದೆ ಎಂದು ಪೊಲೀಸರು ನಿರಾಕರಿಸಿದ್ದಾರೆ. ಡಿಎಂಕೆ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇನ್ನು ಮುಂದೆ ನಿತ್ಯ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದರು. ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಪೊಲೀಸರನ್ನು ಬಳಸುತ್ತಿರುವುದರಿಂದ ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದು ಘಟನೆ ನಡೆದ ದಿನವೇ ಅಣ್ಣಾಮಲೈ ಹೇಳಿದ್ದರು.
ತಮಿಳುನಾಡಿನ ಪ್ರತಿಷ್ಠಿತ ಅಣ್ಣಾ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ(Sexually Assault) ಎಸಗಿದ ಘಟನೆ ಡಿಸೆಂಬರ್ 24ರಂದು ಬೆಳಕಿಗೆ ಬಂದಿದೆ. ಡಿಸೆಂಬರ್ 23 ರಂದು ಸಂಜೆ ಕ್ಯಾಂಪಸ್ ಆವರಣದೊಳಗೆ ಈ ಘಟನೆ ನಡೆದಿದೆ.ವಿದ್ಯಾರ್ಥಿನಿಯು ಕ್ಯಾಂಪಸ್‌ನಲ್ಲಿ ತನ್ನ ಸ್ನೇಹಿತನೊಂದಿಗೆ ತೆರೆದ ಪ್ರದೇಶದಲ್ಲಿ ಕುಳಿತಿದ್ದಳು. ಅಲ್ಲಿಗೆ ಬಂದ ಅಪರಿಚಿತ ಇಬ್ಬರು ಪುರುಷರು ಆಕೆಯ ಸ್ನೇಹಿತನನ್ನು ಥಳಿಸಿ ನಂತರ ಆಕೆಯನ್ನು ಪೊದೆಯೊಳಗೆ ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ವರದಿಯಾಗಿದೆ. ತನಿಖೆಯ ನಂತರ ಪೊಲೀಸರು ಜ್ಞಾನಶೇಖರನ್ ಎಂಬ 37 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಶಂಕಿತ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಈತ ರಸ್ತೆ ಬದಿ ಬಿರಿಯಾನಿ ಅಂಗಡಿ ನಡೆಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. .
ಈ ಸಂಬಂಧ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದು, ಘಟನೆಯಲ್ಲಿ ಬಂಧಿತನಾಗಿರುವ ಆರೋಪಿಯ ಮಾಹಿತಿಯನ್ನು ವಿವರಿಸಿದ್ದಾರೆ. ಅಣ್ಣಾ ವಿಶ್ವವಿದ್ಯಾಲಯದ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಜ್ಞಾನಶೇಖರನ್ ಈ ಹಿಂದೆಯೂ ಅಪರಾಧ ಎಸಗಿದ್ದಾನೆ.ಆತನ ವಿರುದ್ಧ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಉಲ್ಲೇಖಿಸಿದ್ದಾರೆ. ಆತನ ಫೋಟೋ ಸಾರ್ವಜನಿಕವಾದ ಬಳಿಕ ಡಿಎಂಕೆ ಪದಾಧಿಕಾರಿ (ಡಿಎಂಕೆ ವಿದ್ಯಾರ್ಥಿ ವಿಭಾಗದ ಉಪ ಸಂಘಟನಾ ಕಾರ್ಯದರ್ಶಿ) ಎಂದು ತಿಳಿದುಬಂದಿದೆ. ಡಿಎಂಕೆ ನಾಯಕರ ಜತೆ ಇದ್ದ ಕಾರಣ ಪೊಲೀಸರು ಆತನ ವಿರುದ್ಧ ರೌಡಿ ಶೀಟ್ ತೆರೆಯಲಿಲ್ಲ ಎಂದು ಟೀಕಿಸಿದ್ದಾರೆ.(ಏಜೆನ್ಸೀಸ್)