ಪ್ರತಿದಿನ ರೇಪ್​ ಮಾಡುತ್ತಿದ್ದ ಅಪ್ಪನಿಂದ ತಪ್ಪಿಸಿಕೊಂಡು ಅಜ್ಜಿ ಮನೆಗೆ ಬಂದ ಬಾಲಕಿಗೆ ಅಲ್ಲಿಯೂ ಆಘಾತ...

Rape 18 April 20
Published on

ತಂಜಾವೂರು: ತಾಯಿಯಿಲ್ಲದ ಪುಟ್ಟ ಬಾಲಕಿಯ ಪಾಲಿಗೆ ಆಕೆಯ ತಂದೆಯೇ ಖಳನಾಯಕನಾಗಿದ್ದಾನೆ. 15ವರ್ಷದ  ಮಗಳನ್ನು ಅತ್ಯಾಚಾರ ಮಾಡಿ, ಹಿಂಸೆ ನೀಡಿದ್ದಾನೆ. ಅಷ್ಟೇ ಅಲ್ಲ ಆ ಬಾಲಕಿ ಮೇಲೆ ಸಂಬಂಧಿಕನೋರ್ವನೂ ರೇಪ್​ ಮಾಡಿದ್ದಾನೆ.

ತಮಿಳುನಾಡಿನ ತಂಜಾವೂರಿನಲ್ಲಿ ಕ್ರೂರ ಘಟನೆ ನಡೆದಿದೆ. ಸಂತ್ರಸ್ತ ಬಾಲಕಿ 4 ವರ್ಷವಿದ್ದಾಗಲೇ ಆಕೆಯ ತಾಯಿ ಮೃತರಾಗಿದ್ದಾರೆ. ತಂದೆ ಕೃಷಿಗೆ ಸಂಬಂಧಪಟ್ಟ ಕೂಲಿ ಮಾಡಿಕೊಂಡಿದ್ದವನು. ಇವಳಿಗೆ ಇನ್ನೋರ್ವ ತಂಗಿಯೂ ಇದ್ದಾಳೆ. ಪತ್ನಿ ಸತ್ತ ಮೇಲೆ ಈ ವ್ಯಕ್ತಿ ಇಬ್ಬರು ಹೆಣ್ಣುಮಕ್ಕಳೊಂದಿಗೆ ವಾಸವಾಗಿದ್ದ. ಆದರೆ ಹಿರಿಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಕಳೆದ ಐದು ತಿಂಗಳಿಂದಲೂ ಅವಳ ಮೇಲೆ ಅತ್ಯಾಚಾರ ಮಾಡುತ್ತಿದ್ದ.

ಇತ್ತೀಚೆಗೆ ಒಂದು ದಿನ ಬಾಲಕಿ ತನ್ನ ತಂಗಿಯ ಬಳಿ ಈ ಹಿಂಸೆಯ ಬಗ್ಗೆ ಹೇಳಿಕೊಂಡಿದ್ದಳು. ತಂಗಿ ತಡಮಾಡದೆ ವಿಷಯವನ್ನು ಅಮ್ಮನ ಅಪ್ಪನ ಬಳಿ ಅಂದರೆ ಅಜ್ಜನ ಬಳಿ ಹೇಳಿದ್ದಳು. ಹಾಗಾಗಿ ಇಬ್ಬರನ್ನೂ ಅಪ್ಪನ ಮನೆಯಿಂದ ಅಜ್ಜಿಯ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಇದನ್ನೂ ಓದಿ:  ಮುಸ್ಲಿಂ ಧರ್ಮಗುರುವಿನ ಅಂತ್ಯಕ್ರಿಯೆಯಲ್ಲಿ 10ಸಾವಿರ ಮಂದಿ ಭಾಗಿ; ಸುತ್ತಲಿನ 3 ಹಳ್ಳಿ ಸಂಪೂರ್ಣ ಲಾಕ್​​

ಸುಮಾರು ಒಂದು ತಿಂಗಳಿಂದಲೂ ಅಜ್ಜಿಯ ಮನೆಯಲ್ಲಿ ಇದ್ದ ಬಾಲಕಿಗೆ ಒಂದು ದಿನ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ತಪಾಸಣೆ ಮಾಡಿಸಿದಾಗ ಆಕೆ ಗರ್ಭಿಣಿ ಎಂಬ ಶಾಕಿಂಗ್​ ವಿಷಯ ಬೆಳಕಿಗೆ ಬಂತು.

ಇನ್ನೂ 15 ವರ್ಷದ ಹುಡುಗಿ ಗರ್ಭಿಣಿ ಎಂಬ ವಿಚಾರ ಕೇಳುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿಯೇ ಪೊಲೀಸರಿಗೆ ದೂರು ನೀಡಿದರು. ಪೊಲೀಸ್​ ವಿಚಾರಣೆ ವೇಳೆ ಬಾಲಕಿ ಎಲ್ಲ ವಿಷಯವನ್ನೂ ತಿಳಿಸಿದ್ದಾಳೆ. ಪ್ರತಿದಿನ ರಾತ್ರಿ ಅಪ್ಪ ಅತ್ಯಾಚಾರ ಮಾಡುತ್ತಿದ್ದ. ಇಲ್ಲಿ ಅಜ್ಜಿ ಮನೆಗೆ ಬಂದ ಮೇಲೆ ಅಜ್ಜಿಯ ಸಂಬಂಧಿಯೋರ್ವನೂ ನನ್ನ ಮೇಲೆ ರೇಪ್​ ಮಾಡಿದ್ದಾನೆ ಎಂದು ಕಣ್ಣೀರು ಹಾಕಿದ್ದಾಳೆ.

ಸದ್ಯ ಬಾಲಕಿಯ ತಂದೆ ಮತ್ತು ಸಂಬಂಧಿಯ ವಿರುದ್ಧ ಪ್ರಕರಣ ದಾಖಲಾಗಿ, ಜೈಲಿಗೆ ಕಳಿಸಲಾಗಿದೆ. ಬಾಲಕಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net