ವಯನಾಡು ದುರಂತದಲ್ಲಿ 32 ಮಂದಿ ರಕ್ಷಣೆ; ನರ್ಸ್​​​ ಸಬೀನಾ ಸಾಧನೆಗೆ ಸಂದ ಗೌರವ ಇದು

Untitled-design-2024-08-16T160315.771
Published on

ಚೆನ್ನೈ: ಕೇರಳದ ವಯನಾಡು ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ 300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ವಿನಾಶದಿಂದ ನೂರಾರು ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಭೂಕುಸಿತದಲ್ಲಿ ಸಿಲುಕಿಕೊಂಡವರಿಗೆ ಚಿಕಿತ್ಸೆ ನೀಡುವ ಸಲುವಾಗಿ ನದಿಗೆ ಅಡ್ಡಲಾಗಿ ಜಿಪ್​ಲೈನ್​ ಮಾಡಿ 35ಕ್ಕೂ ಹೆಚ್ಚು ಜನರ ಜೀವಗಳನ್ನು ಉಳಿಸಿದ ನರ್ಸ್​​​ ಎ.ಸಬೀನಾ ಅವರಿಗೆ ತಮಿಳುನಾಡು ಸರ್ಕಾರ ಗುರುವಾರ(ಆಗಸ್ಟ್​​ 15) ಅವರ ಧೈರ್ಯವನ್ನು ಮೆಚ್ಚಿ ಕಲ್ಪನಾ ಚಾವ್ಲಾ ಪ್ರಶಸ್ತಿಯನ್ನು ನೀಡಿದೆ.

ನೀಲಗಿರಿ ಜಿಲ್ಲೆಯವರಾದ ಎ.ಸಬೀನಾ ಅವರಿಗೆ ತಮಿಳುನಾಡು ಸಿಎಂ ಸ್ಟಾಲಿನ್​ ಅವರು ಸ್ವಾತಂತ್ರ್ಯದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿದ ಸಬೀನಾ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ ವಯನಾಡಿನ ಪರಿಸ್ಥಿತಿ ಬಗ್ಗೆ ತಿಳಿಸಿದರು. ಜುಲೈ 30ರಂದು ಬೆಳಗ್ಗೆ 11ಗಂಟೆ ಸುಮಾರಿಗೆ ವಯನಾಡು ಭೂಕುಸಿತದಲ್ಲಿ ಸಿಲುಕಿರುವವರಿಗೆ ಸಹಾಯ ಮಾಡಲು ನರ್ಸ್​​ ಅಗತ್ಯವಿದೆ ಎಂದು ಎನ್​ಜಿಒಯಿಂದ ಕರೆ ಬಂತು. ಬಳಿಕ ನಾನು ಕೂಡಲೇ ಭೂಕುಸಿತ ಪೀಡಿತ ಪ್ರದೇಶಕ್ಕೆ ಹೊರೆಟೇನು. ಸ್ಥಳಕ್ಕೆ ಹೋದ ನಂತರ ಅಲ್ಲಿನ ವಿಧ್ವಂಸಕ ಪರಿಸ್ಥಿತಿ ನೋಡಿದೆ. ಎಲ್ಲೆಂದರಲ್ಲಿ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಮನೆಗಳು ಕೊಚ್ಚಿ ಹೋಗುತ್ತಿದ್ದವು ಎಂದು ಹೇಳಿದರು.

ಅಲ್ಲಿಗೆ ತಲುಪಿದಾಗ ಜನರು ನದಿಯ ಇನ್ನೊಂದು ದಡದಲ್ಲಿ ಸಿಲುಕಿಕೊಂಡಿದ್ದರು. ಆದರೆ ಅವರನ್ನು ತಲುಪಲು ಯಾವುದೇ ಮಾರ್ಗವಿರಲಿಲ್ಲ. ಎನ್‌ಡಿಆರ್‌ಎಫ್ ತಂಡ ಜಿಪ್‌ಲೈನ್ ಮಾಡಿದ್ದರು. ಅಲ್ಲಿದ್ದ ನರ್ಸ್​ಗಳೆಲ್ಲ ಮಹಿಳೆಯರು. ಸುಮಾರು 100 ಮಹಿಳಾ ನರ್ಸ್​ಗಳು ಕೆಲಸ ಮಾಡುತ್ತಿದ್ದರು. ಜಿಪ್​ಲೈನ್​ನಲ್ಲಿ ಹೋಗಲು ಪುರುಷರು ಇರಲಿಲ್ಲ. ಜನರ ಜೀವವನ್ನುಉಳಿಸುವ ಏಕೈಕ ಉದ್ದೇಶದಿಂದ ನಾನು ಜಿಪ್​ಲೈನ್​ನಲ್ಲಿ ನದಿಯ ಇನ್ನೊಂದು ಬದಿಗೆ ಹೋಗಲು ನಿರ್ಧರಿಸಿದೆ.

ನದಿಯ ಇನ್ನೊಂದು ಭಾಗಕ್ಕೆ ಜಿಪ್​ಲೈನ್​ನಲ್ಲಿ ಹೋಗುತ್ತಿದ್ದಾಗ ನದಿ ಪ್ರವಾಹದಲ್ಲಿ ಮೃತದೇಹಗಳು ತೇಲುತ್ತಿರುವುದನ್ನು ನೋಡಿದೆ. ಆ ದೃಶ್ಯಗಳನ್ನು ನೋಡಿ ನಾನು ಧೈರ್ಯ ಕಳೆದುಕೊಳ್ಳಲಿಲ್ಲ, ಗಾಬರಿಯಾಗಲಿಲ್ಲ ಎಂದು ಸಬೀನಾ ಹೇಳಿದರು. 10 ಬಾರಿ ಜಿಪ್​ಲೈನ್​ ಮೂಲಕ ನದಿಯನ್ನು ದಾಟಿ ದ್ವೀಪದಲ್ಲಿ ಸಿಲುಕಿದ್ದ 35 ಮಂದಿಗೆ ವೈದ್ಯಕೀಯ ಚಿಕಿತ್ಸೆ ನೀಡುವ ಮೂಲಕ ಜೀವ ಜೀವ ಉಳಿಸಿದ್ದಾರೆ.

ಸಬೀನಾ ಅವರು ಜಿಪ್​ಲೈನಿಂಗ್​ನಲ್ಲಿ ಹೋಗಿ ಚಿಕಿತ್ಸೆ ನೀಡಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ವೈರಲ್​ ಪೋಸ್ಟ್​​​ ತಮಿಳುನಾಡು ಸಿಎಂ ಅವರು ನೋಡಿ ಸಬೀನಾ ಅವರನ್ನು ಗೌರವಿಸಲು ಸೆಕ್ರೆಟರಿಯೇಟ್​ಗೆ ಆಹ್ವಾನಿಸಿದ್ದಾರೆ. ಪ್ರಶಸ್ತಿ ಪಡೆದಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಭಾಷೆ, ಜಾತಿ,ಧರ್ಮದ ಭೇದವಿಲ್ಲದೆ ವಿಪತ್ತಿನ ಸಮಯಲ್ಲಿ ಎಲ್ಲರೂ ಕೈಜೋಡಿಸಬೇಕು ಎಂಬುದು ನನ್ನ ನಂಬಿಕೆ ಎಂದು ಅವರ ಹೇಳಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net