ATM ದರೋಡೆ ಮಾಡಿ ಟ್ರಕ್​ನಲ್ಲಿ ಪರಾರಿಯಾಗ್ತಿದ್ದ ಖದೀಮರ ಮೇಲೆ ಗುಂಡಿನ ದಾಳಿ​! ಓರ್ವ ಸಾವು, ಇನ್ನೋರ್ವ ಗಂಭೀರ

ATM
Published on

ಚೆನ್ನೈ: ಎಟಿಎಂ ( ATM ) ದರೋಡೆ ಮಾಡಿದ ಗ್ಯಾಂಗ್​ ಅನ್ನು ಗುರಿಯಾಗಿಸಿ ಪೊಲೀಸರು ಗುಂಡಿನ ದಾಳಿ ನಡೆಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಪೊಲೀಸರ ಗುಂಡೇಟಿಗೆ ಓರ್ವ ಕಳ್ಳ ಬಲಿಯಾಗಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಇನ್ನುಳಿದ ನಾಲ್ವರನ್ನು ಬಂಧಿಸಲಾಗಿದೆ.

ದರೋಡೆಕೋರರ ಗ್ಯಾಂಗ್ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ​ ಎಟಿಎಂ ದರೋಡೆ ಮಾಡಿ, ನಗದು ಹಾಗೂ ಆಯುಧಗಳೊಂದಿಗೆ ಕಂಟೈನರ್ ಲಾರಿಯಲ್ಲಿ ತಮಿಳುನಾಡು ಕಡೆಯಿಂದ ಪರಾರಿಯಾಗುತ್ತಿತ್ತು. ಕೇರಳ ಪೊಲೀಸರಿಂದ ಮಾಹಿತಿ ಪಡೆದು ಫೀಲ್ಡಿಗಿಳಿದ ತಮಿಳುನಾಡು ಪೊಲೀಸರು, ಲಾರಿಯನ್ನು ಅತ್ಯಂತ ವೇಗವಾಗಿ ಚೇಸ್ ಮಾಡಿದರು.

ಸುಮಾರು ಒಂದು ಗಂಟೆ ಲಾರಿಯನ್ನು ಪೊಲೀಸರ ವಾಹನ ಬೆನ್ನಟ್ಟಿದೆ. ಈ ವೇಳೆ ವಾಹನ ನಿಲ್ಲಿಸುವಂತೆ ಹೇಳಿದರೂ ಅದನ್ನು ನಿರಾಕರಿಸಿ ವೇಗವಾಗಿ ಹೋಗುತ್ತಿದ್ದಾಗ ಪೊಲೀಸರು ಗುಂಡು ಹಾರಿಸಿದ್ದು, ಎನ್‌ಕೌಂಟರ್‌ನಲ್ಲಿ ಒಬ್ಬ ಕಳ್ಳ ಬಲಿಯಾಗಿದ್ದಾನೆ. ಮತ್ತೊಬ್ಬ ಕಳ್ಳ ಗಾಯಗೊಂಡಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದರೋಡೆಕೋರರು ಬಳಸಿದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಎಲ್ಲ ಘಟನೆ ನಾಮಕ್ಕಲ್ ಜಿಲ್ಲೆಯ ಕುಮಾರಪಾಳ್ಯಂನಲ್ಲಿ ಈ ಘಟನೆ ನಡೆದಿದೆ.

ನಾಮಕ್ಕಲ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರಾಜೇಶ್ ಖನ್ನಾ ನೇತೃತ್ವದ ತಂಡ ವಾಹನವನ್ನು ಬೆನ್ನಟ್ಟಿ ಹಿಡಿದಿದೆ. ಕಳ್ಳರು ಹರಿಯಾಣ ಅಥವಾ ರಾಜಸ್ಥಾನದವರು ಎಂದು ಶಂಕಿಸಲಾಗಿದೆ. ಈ ಗ್ಯಾಂಗ್​ ಹಲವು ಕಳ್ಳತನದಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂರು ಎಟಿಎಂಗಳನ್ನು ದರೋಡೆ ಮಾಡಿ ರೂ.65 ಲಕ್ಷಕ್ಕೂ ಅಧಿಕ ಹಣವನ್ನು ದೋಚಿದ್ದಾರೆ. ಕಂಟೈನರ್‌ ಒಳಗೆ ಕಾರು ಮತ್ತು ಎಟಿಎಂ ಇರುವ ವಿಡಿಯೋವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net