

Annamalai: ತಮಿಳುನಾಡಿನ ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದ (MSU) 32 ನೇ ಘಟಿಕೋತ್ಸವ ಸಮಾರಂಭದಲ್ಲಿ DMK ನಾಯಕ ಎಂ. ರಾಜನ್ ಅವರ ಪತ್ನಿಯೂ ರಾಜ್ಯಪಾಲರಿಂದ ಪದವಿ ಪಡೆಯಲು ನಿರಾಕರಿಸಿದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಬುಧವಾರ ತಮಿಳುನಾಡಿನ ಆಡಳಿತಾರೂಢ DMK ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ನಾಯಕ ಅಣ್ಣಾಮಲೈ, ಸಿಎಂ ಸ್ಟಾಲಿನ್ ತಮ್ಮ ಪಕ್ಷದ ಸದಸ್ಯರಿಗೆ ಕೀಳು ಮಟ್ಟದ ರಾಜಕೀಯವನ್ನು ಶಿಕ್ಷಣ ಸಂಸ್ಥೆಗಳಲ್ಲಿ ತರದಂತೆ ಸಲಹೆ ನೀಡಬೇಕು. ತಮಿಳುನಾಡಿನಲ್ಲಿ ಡಿಎಂಕೆಯನ್ನು ಬೆಂಬಲಿಸುವವರಿಗಿಂತ ಅದನ್ನು ದ್ವೇಷಿಸುವವರೇ ಹೆಚ್ಚು. ಇವರು ಇದೇ ರೀತಿ ವರ್ತಿಸಿದರೆ, ಮುಖ್ಯಮಂತ್ರಿಗಳು ತಮ್ಮ ಮುಖವನ್ನು ಎಲ್ಲಿ ಮರೆಮಾಡುತ್ತಾರೆ? ಎಂದು ಕಿಡಿಕಾರಿದ್ದಾರೆ.
ಅಲ್ಲದೆ, ಡಿಎಂಕೆ ಯುಗಗಳಿಂದಲೂ ಈ ತರಹದ ನಾಟಕಗಳನ್ನು ಮಾಡುತ್ತಿದೆ. ಈ ರೀತಿಯ ವರ್ತನೆ ತೋರುವುದರಿಂದ ಇವರು ಖ್ಯಾತಿಗಳಿಸಲು ನೋಡುತ್ತಾರೆ. ಈ ಘಟನೆಗಳು ಶಿಕ್ಷಣ ಸಂಸ್ಥೆಗಳಲ್ಲಿ ಆಗುತ್ತಿರುವುದು ಖಂಡನೀಯ ಎಂದು ಅಣ್ಣಾಮಲೈ ಬರೆದುಕೊಂಡಿದ್ದಾರೆ.
ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದ (MSU) 32 ನೇ ಘಟಿಕೋತ್ಸವ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರಿಂದ ಪದವಿ ಪಡೆಯಲು ವಿದ್ಯಾರ್ಥಿಗಳು ಸಾಲುಗಟ್ಟಿ ನಿಂತಿದ್ದರು. ಜೀನ್ ಜೋಸೆಫ್ ಎಂಬ ವಿದ್ಯಾರ್ಥಿನಿ ರಾಜ್ಯಪಾಲರನ್ನು ಬೈಪಾಸ್ ಮಾಡಲು ಆಯ್ಕೆ ಮಾಡಿಕೊಂಡಳು ಮತ್ತು ಬದಲಿಗೆ ಅವರ ಪಕ್ಕದಲ್ಲಿ ನಿಂತಿದ್ದ ಉಪಕುಲಪತಿ ಚಂದ್ರಶೇಖರ್ ಅವರಿಂದ ಪದವಿ ಪಡೆದಳು.
ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೀನ್ ಜೋಸೆಫ್, ರಾಜ್ಯಪಾಲ ಆರ್.ಎನ್. ರವಿ ತಮಿಳುನಾಡು ಮತ್ತು ತಮಿಳರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ನಾನು ಅವರಿಂದ ನನ್ನ ಪದವಿಯನ್ನು ಪಡೆಯಲು ಬಯಸಲಿಲ್ಲ ಎಂದು ತಿಳಿಸಿದ್ದಾರೆ.