

ಜೀರ್ಣಕ್ರಿಯೆಗೆ ಸಹಕಾರಿ: ಒಂದು ಚಮಚದಷ್ಟು ಹುಣಸೆ ಹಣ್ಣನ್ನು ಒಂದು ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕಿವುಚಬೇಕು. ನಂತರ ಇದನ್ನು ಸೋಸಿ ಸಿಕ್ಕ ನೀರನ್ನು ತರಕಾರಿಗಳು ಮತ್ತು ಹಣ್ಣುಗಳನ್ನು ತೊಳೆಯಲು ಬಳಸಬೇಕು. ಹುಣಸೆ ಹಣ್ಣಿನಲ್ಲಿರುವ ಟಾರ್ಟಾರಿಕ್ ಆಸಿಡ್ ಹಣ್ಣುಗಳು ಮತ್ತು ತರಕಾರಿಗಳ ಮೇಲೆ ಇರುವ ರಾಸಾಯನಿಕಗಳನ್ನು ತಕ್ಕಮಟ್ಟಿಗೆ ತೆಗೆಯಲು ಸಹಾಯ ಮಾಡುತ್ತದೆ. ಮಲೆನಾಡು ಮತ್ತು ಕರಾವಳಿಯ ಭಾಗಗಳಲ್ಲಿ ಮಳೆಗಾಲದಲ್ಲಿ ಮತ್ತು ಅತಿಯಾದ ನೆಗಡಿ ಅಥವಾ ಜ್ವರ ಇದ್ದಾಗ ನೀರಿಗೆ ಹುಣಸೆ ಹಣ್ಣನ್ನು ಸೇರಿಸಿ ಅದಕ್ಕೆ ಸ್ವಲ್ಪ ಉಪ್ಪು, ಬೆಲ್ಲ, ಜೀರಿಗೆ ಮತ್ತು ಕಾಳುಮೆಣಸು ಹಾಕಿ ಕುದಿಸಿದ ನೀರನ್ನು ಕುಡಿಯುತ್ತಾರೆ. ಇದಕ್ಕೆ ಖಟ್ನೆ ಎಂದು ಕರೆಯುತ್ತಾರೆ. ಇದನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗಿ ನೆಗಡಿ, ತಲೆಭಾರದಂತಹ ತೊಂದರೆಗಳು ಕಡಿಮೆಯಾಗಲು ಸಹಾಯವಾಗುತ್ತದೆ.
ಹೃದಯಕ್ಕೆ ಹತ್ತಿರ: ಹುಣಸೆಹಣ್ಣಿಗೆ ನಮ್ಮ ಮೂತ್ರಕೋಶವನ್ನು ಶುದ್ಧೀಕರಿಸುವ ಗುಣವಿದೆ ಎಂದು ಆಯುರ್ವೆದ ಗ್ರಂಥಗಳು ಹೇಳುತ್ತವೆ. ರುಚಿ ಹುಳಿಯಾಗಿರುವ ಬಹುತೇಕ ಎಲ್ಲಾ ದ್ರವ್ಯಗಳು ಹೃದಯಕ್ಕೆ ಶಕ್ತಿಯನ್ನು ಕೊಡುತ್ತವೆ ಎಂದು ಆಯುರ್ವೆದ ಹೇಳುತ್ತದೆ. ಹಾಗೆಯೇ ಹುಣಸೆಹಣ್ಣು ಕೂಡ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಒಂದು ವರ್ಷ ಹಳೆಯ ಹುಣಸೆಹಣ್ಣು ಅಷ್ಟಾಗಿ ಪಿತ್ತವನ್ನು ಹೆಚ್ಚಿಸುವುದಿಲ್ಲ ಎಂದು ಕೈಯದೇವ ನಿಘಂಟು ಹೇಳುತ್ತದೆ. ಚೆನ್ನಾಗಿ ಬೆಳೆದಿರುವ ಹುಣಸೆಹಣ್ಣು ಮಲಬದ್ಧತೆಯನ್ನು ಅನುಭವಿಸುತ್ತಿರುವವರಿಗೆ ಅನುಕೂಲಕರ. ಅಂಥವರು ಸ್ವಲ್ಪ ನೀರಿಗೆ ಚಿಕ್ಕ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣನ್ನು ಹಾಕಿ ಅದಕ್ಕೆ ಜೋನಿಬೆಲ್ಲ ಮತ್ತು ಸೈಂಧವ ಲವಣವನ್ನು ಹಾಕಿ ರಾತ್ರಿ ಊಟದ ಜೊತೆಗೆ ಸೇವಿಸಬೇಕು. ಇದರಿಂದ ಮಲಬದ್ಧತೆಯಲ್ಲಿ ಅನುಕೂಲವಾಗುತ್ತದೆ. ಹೆಚ್ಚಾದರೆ ಇದು ಭೇದಿಗೆ ಕಾರಣವಾಗಬಹುದು. ಹುಣಸೆ ಹಣ್ಣನ್ನು ಬಿಸಿ ಮಾಡಿ ಬಾವಿನ ಮೇಲೆ ಹಚ್ಚಿದರೆ ಬಾವು, ಉರಿಯೂತ ಮತ್ತು ನೋವು ಕಡಿಮೆಯಾಗಲು ಸಹಾಯವಾಗುತ್ತದೆ.
ಬ್ಯಾಕ್ಟೀರಿಯಾ ನಿವಾರಕ ಗುಣ: ಕೆಲವು ಸಂಶೋಧನೆಗಳ ಪ್ರಕಾರ ಹುಣಸೆಹಣ್ಣು ಹಾನಿಕಾರಕವಾದ ಸೂಕ್ಷ್ಮ ಜೀವಿಗಳು ಅಥವಾ ಬ್ಯಾಕ್ಟೀರಿಯಾಗಳನ್ನು ನಿವಾರಿಸುವ ಗುಣವನ್ನುಹೊಂದಿದೆ. ಇನ್ನು ಕೆಲವು ಸಂಶೋಧನೆಗಳ ಪ್ರಕಾರ ಇದರ ನಿಯಮಿತ ಸೇವನೆಯಿಂದ ಹೃದ್ರೋಗ, ಕ್ಯಾನ್ಸರ್ ಮತ್ತು ಡಯಾಬಿಟಿಸ್ನಂತಹ ತೊಂದರೆಗಳ ವಿರುದ್ಧ ರಕ್ಷಣೆಯನ್ನು ಕೊಡುತ್ತದೆ. ಪೋಷಕಾಂಶಗಳಲ್ಲಿ ಅತ್ಯಂತ ಶ್ರೀಮಂತವಾಗಿರುವ ಇದರಲ್ಲಿ ಹೇರಳ ಪ್ರಮಾಣದಲ್ಲಿ ಮ್ಯಾಗ್ನಿಸಿಯಂ, ಪೊಟ್ಯಾಸಿಯಂ, ಕಬ್ಬಿಣ, ಕ್ಯಾಲ್ಸಿಯಂ, ಪಾಸ್ಪರಸ್, ತಾಮ್ರ, ಬಿ ವಿಟಮಿನ್ ಇವೆ. ಸ್ವಲ್ಪ ಪ್ರಮಾಣದಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ಬಿ 6, ವಿಟಮಿನ್ ಬಿ5 ಮತ್ತು ಸೆಲೇನಿಯಮ್ ಇವೆ.